ವಕ್ಫ್ ವ್ಯವಸ್ಥಾಪನಾ ಸಮಿತಿಗೆ ನೇಮಕ ಮಾಡಿರುವ ಸದಸ್ಯರನ್ನು ತೆಗೆಯುವ ಅಧಿಕಾರ ವಕ್ಪ್ ಮಂಡಳಿಗೆ ಇದೆಯೇ ವಿನಾ ವ್ಯವಸ್ಥಾಪನಾ ಸಮಿತಿಗಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಬದಾರಿಯಾ ಜುಮ್ಮಾ ಮಸೀದಿ, ಮುಸ್ಲಿಮ್ ಜಮಾತ್ ನಿರ್ಧಾರ ಪ್ರಶ್ನಿಸಿ ಅಬ್ದುಲ್ ಸತ್ತಾರ್ ಮತ್ತು ಇನ್ನೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ವಕ್ಫ್ ಕಾಯಿದೆ ಸೆಕ್ಷನ್ 32(2)(ಜಿ) ಅಡಿ ಮುತಾವಲ್ಲಿಗಳನ್ನು ನೇಮಿಸುವ ಅಥವಾ ತೆಗೆಯುವ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರ ಇದೆ. ಮುತಾವಲ್ಲಿಗಳನ್ನು ವಜಾಗೊಳಿಸುವಾಗ ವಕ್ಫ್ ಕಾಯಿದೆ ಸೆಕ್ಷನ್ 64 ಮತ್ತು ಕರ್ನಾಟಕ ವಕ್ಫ್ ನಿಯಮಗಳು 2017ರ ನಿಯಮ 58ರ ಅಡಿ ಇರುವ ಕಾರಣಗಳನ್ನು ಪಾಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ವಕ್ಫ್ ಕಾಯಿದೆ 1995ರ ಸೆಕ್ಷನ್ 3ರ ಉಪ ಸೆಕ್ಷನ್ ಅಡಿ ಮುತಾವಲ್ಲಿ ವ್ಯಾಖ್ಯಾನದ ಅಡಿ ಸಮಿತಿ ಅಥವಾ ಯಾವುದೇ ಸಮಿತಿಯ ಸದಸ್ಯರನ್ನು ಒಳಗೊಳ್ಳಲಾಗುತ್ತದೆ. ಅರ್ಜಿದಾರರನ್ನು ವಜಾಗೊಳಿಸಿ, ಬೇರೆಯವರನ್ನು ನೇಮಿಸುವ ಮಸೀದಿಯ ನಿರ್ಣಯವು ವಜಾಕ್ಕೆ ಅರ್ಹವಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.
“ವಕ್ಫ್ ಕಾಯಿದೆ ಸೆಕ್ಷನ್ 32 (2)(ಜಿ) ಅಡಿ ವ್ಯವಸ್ಥಾಪನಾ ಸಮಿತಿಯ ಸದಸ್ಯರ ವಜಾ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡಲಾಗಿದೆಯೇ ವಿನಾ ಸಮಿತಿಗಲ್ಲ. ವಜಾ ಮಾಡಬೇಕಾದರೆ ಇರಬೇಕಾದ ಕಾರಣಗಳು ಸೆಕ್ಷನ್ 64ರಲ್ಲಿ ಉಲ್ಲೇಖಿತವಾಗಿದ್ದು, ನಿಯಮ 58ರ ಅಡಿ ಪ್ರಕ್ರಿಯೆ ಪಾಲಿಸಬೇಕಿದೆ. ಇದರಲ್ಲಿ ನೋಟಿಸ್ ಹೇಗೆ ನೀಡಬೇಕು ಎಂಬುದರ ಮಾಹಿತಿಯೂ ಇದೆ” ಎಂದು ನ್ಯಾಯಾಲಯ ಹೇಳಿದೆ.
“ಈ ಎಲ್ಲಾ ನಿಬಂಧನೆಗನ್ನು ಒಟ್ಟಿಗೆ ಓದಿದರೆ ಯಾವುದೇ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ವಜಾ ಮಾಡುವ ಅಧಿಕಾರ ವ್ಯವಸ್ಥಾಪನಾ ಸಮಿತಿಗೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರ ಇರಲಿದೆ. ಇಂಥ ಪ್ರಕ್ರಿಯೆ ಆರಂಭಿಸುವ ಸ್ವಾತಂತ್ರ್ಯವು ವಕ್ಫ್ ಮಂಡಳಿಗೆ ಇದೆ ಎಂದಿದ್ದು, ಆಕ್ಷೇಪಾರ್ಹ ಆದೇಶ ವಜಾಗೊಂಡಿರುವುದರಿಂದ ಅರ್ಜಿದಾರರು ಸಮಿತಿಯ ಸದಸ್ಯರಾಗಿ ಮುಂದುವರಿಯಲಿದ್ದಾರೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮಸೀದಿ ಪ್ರತಿನಿಧಿಸಿದ್ದ ವಕೀಲರು “ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ವ್ಯವ್ಥಾಪನಾ ಸಮಿತಿಯು ತುರ್ತು ಕ್ರಮಗೊಂಡಿತ್ತು” ಎಂದಿದ್ದರು.