ಸುದ್ದಿಗಳು

ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ತೃಪ್ತಿ; ವಕೀಲ ಪ್ರೀತಮ್‌ ಹಲ್ಲೆ ಪ್ರಕರಣದ ಸ್ವಯಂಪ್ರೇರಿತ ಅರ್ಜಿ ಇತ್ಯರ್ಥ

Bar & Bench

ಚಿಕ್ಕಮಗಳೂರಿನ ವಕೀಲ ಪ್ರೀತಮ್‌ ಮೇಲೆ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಕೀಲರ ಸಂಘದ (ಎಎಬಿ) ಮನವಿ ಆಧರಿಸಿ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣವನ್ನು ರಾಜ್ಯ ಸರ್ಕಾರದ ಪ್ರತಿಕ್ರಿಯೆಯಿಂದ ತೃಪ್ತಿಗೊಂಡು ಬುಧವಾರ ಕರ್ನಾಟಕ ಹೈಕೋರ್ಟ್‌ ಇತ್ಯರ್ಥಪಡಿಸಿದೆ.

ವಾದ-ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸರ್ಕಾರ ಕ್ರಮಕೈಗೊಂಡಿರುವುದರಿಂದ ಅರ್ಜಿ ಬಾಕಿ ಉಳಿಸಿಕೊಳ್ಳಲು ಯಾವುದೇ ಸಕಾರಣವಿಲ್ಲ ಎಂದು ವಿಲೇವಾರಿ ಮಾಡಿತು.

“ರಾಜ್ಯ ಸರ್ಕಾರವು ಎಲ್ಲಾ ಅಗತ್ಯ ಕ್ರಮಕೈಗೊಂಡಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಈಗಾಗಲೇ ತನಿಖೆ ಆರಂಭಗೊಂಡಿದೆ. ಹೀಗಾಗಿ, ಯಾವುದೇ ನಿರ್ದೇಶನ ನೀಡುವ ಅಗತ್ಯ ಕಾಣುತ್ತಿಲ್ಲ. ಎಎಬಿ ಮನವಿ ಆಧರಿಸಿ ಸಂಜ್ಞೇಯ ಪರಿಗಣಿಸಿರುವ ಉದ್ದೇಶವು ಈಡೇರಿದೆ. ಈ ನೆಲೆಗಟ್ಟಿನಲ್ಲಿ ಅರ್ಜಿಯನ್ನು ಬಾಕಿ ಉಳಿಸುವುದಕ್ಕೆ ಸಕಾರಣಗಳಿಲ್ಲ. ಆದ್ದರಿಂದ ಅರ್ಜಿ ಇತ್ಯರ್ಥಪಡಿಸಲಾಗಿದೆ” ಎಂದು ಆದೇಶದಲ್ಲಿ ಹೇಳಿದೆ.

“ನ್ಯಾಯಾಲಯದ ಸೂಚನೆಯ ಮೇರೆಗೆ ರಚನೆಯಾಗಿದ್ದ ಉನ್ನತಾಧಿಕಾರ ಸಮಿತಿಯು ಆರೋಪಿಗಳನ್ನು ಬಂಧಿಸುವಂತೆ ಆದೇಶಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಕಾನೂನಿನ ಅನ್ವಯ ತನಿಖಾ ಸಂಸ್ಥೆ ನಡೆದುಕೊಳ್ಳಬೇಕು ಎಂದು ಉನ್ನತಾಧಿಕಾರ ಸಮಿತಿಯ ಬಹುಮತ ನಿರ್ಧಾರ ತಿಳಿಸಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು. ತನಿಖೆಗೆ ಕಾಲಮಿತಿ ನಿಗದಿಪಡಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳಬೇಕು ಎಂಬ ವಿವೇಕ್‌ ರೆಡ್ಡಿ ಅವರ ಕೋರಿಕೆಯನ್ನು ನ್ಯಾಯಾಲಯವು ತಿರಸ್ಕರಿಸಿತು. "ಈಗಷ್ಟೇ ಸಿಐಡಿ ತನಿಖೆ ಆರಂಭವಾಗಿದ್ದು, ತನಿಖೆಯಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಲು ನ್ಯಾಯಾಲಯದ ಮುಂದೆ ಯಾವುದೇ ದಾಖಲೆ ಇರಿಸಲಾಗಿಲ್ಲ. ಸೇವಾ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗದು. ರಾಜ್ಯ ಸರ್ಕಾರ ಮತ್ತು ಈ ನ್ಯಾಯಾಲಯದ ಸಲಹೆಗೆ ಸ್ಪಂದಿಸಿದ ಹಿರಿಯ ವಕೀಲರಿಗೆ ಅಭಿನಂದನೆ” ಎಂದು ಆದೇಶದಲ್ಲಿ ಹೇಳಿದೆ.

ಇದಕ್ಕೂ ಮುನ್ನ ವಕೀಲ ಸಮುದಾಯವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಅವರು “ಸಿಐಡಿಯ ಪ್ರಾಥಮಿಕ ತನಿಖಾ ಹಂತದಲ್ಲಿ ಕ್ರಮಕೈಗೊಳ್ಳಲು ಯಾವುದೇ ಕಾಲಮಿತಿ ನಿಗದಿಪಡಿಸಲಾಗಿಲ್ಲ. ಪೊಲೀಸರು ಪ್ರತಿಭಟನೆಗೆ ಇಳಿದರೆ ರಾಜ್ಯದ ಜನರಿಗೆ ಯಾವ ಸಂದೇಶ ರವಾನೆಯಾಗಲಿದೆ? ಪ್ರೀತಮ್‌ ಮೇಲಿನ ಹಲ್ಲೆಯ ಆರೋಪಿಗಳಾದ ಪೊಲೀಸರ ಬಂಧನಕ್ಕೆ ತಡ ಮಾಡಲಾಗುತ್ತಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿದ್ದರೂ ಸಾಕ್ಷಿಗಳು ಮತ್ತು ಅವರ ಹೇಳಿಕೆ ಪಡೆಯಲು ಸ್ಥಳೀಯ ಪೊಲೀಸರನ್ನು ಬಳಕೆ ಮಾಡಲಾಗುತ್ತಿದೆ” ಎಂದು ಆಕ್ಷೇಪಿಸಿದರು.

“ಸ್ಥಳೀಯ ಪೊಲೀಸರನ್ನು ತನಿಖೆಯಲ್ಲಿ ಭಾಗಿ ಮಾಡಿಕೊಳ್ಳುತ್ತಿರುವುದರಿಂದ ಅವರು ಸಾಕ್ಷಿ ತಿರುಚುತಿದ್ದಾರೆ. ತನಿಖೆಯನ್ನು ಹೇಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬುದನ್ನು ನೋಡಿ. ಈ ಸಾಕ್ಷಿಗಳನ್ನು ಆಧರಿಸಿ ನೋಡುವುದಾದರೆ ಘಟನೆಯೇ ನಡೆದಿಲ್ಲ ಎಂಬಂತಾಗಲಿದೆ. ಇದು ಅನ್ಯಾಯವಾಗಲಿದೆ” ಎಂದರು.

ಮುಂದುವರಿದು, “ಸಿಐಡಿ ತನಿಖೆ ನಡೆಸುವುದರಿಂದ ಪ್ರಕರಣ ಹಾದಿ ತಪ್ಪಲಿದೆ. ತಟಸ್ಥ ತನಿಖಾ ಸಂಸ್ಥೆ ತನಿಖೆ ನಡೆಸಬೇಕು. ಈ ನಿಟ್ಟಿನಲ್ಲಿ ವಿಶೇಷ ತನಿಖಾ ದಳವನ್ನು ನೇಮಕ ಮಾಡಬೇಕು” ಎಂದು ಕೋರಿದರು.

ಇದಕ್ಕೆ ಪೀಠವು “ತನಿಖೆ ಯಾವ ಹಂತದಲ್ಲಿದೆ? ಸಿಐಡಿ ರೀತಿಯಲ್ಲಿ ಎಲ್ಲಿ ಎಸ್‌ಐಟಿ ರಚಿಸಲಾಗಿದೆ? ತನಿಖೆಯ ಮೇಲೆ ನಿಗಾ ಇಡುವುದು ನ್ಯಾಯಾಲಯದ ಕೆಲಸವಲ್ಲ. ಹೀಗೆ ಮಾಡಿದರೆ ವಕೀಲರು ಮತ್ತು ನ್ಯಾಯಮೂರ್ತಿಗಳ ನಡುವೆ ಒಪ್ಪಂದವಿದೆ ಎಂದು ಯಾರಾದರೂ ಹೇಳಬಹುದು. ನೀವು (ವಕೀಲರು) ಪ್ರತಿಭಟನೆ ಮಾಡಬಹುದು. ನಾವು ಮಾಡಲಾಗದು. ವಕೀಲರ ಸಮುದಾಯ ಅಧ್ಯಯನ ಪೂರ್ಣ ವರ್ಗವಾಗಿದೆ. ಯಾರೋ ಒಬ್ಬರನ್ನು ಬಂಧಿಸಬೇಕು ಎಂದು ವಕೀಲರ ಸಮುದಾಯ ಕೋರಿದರೆ ಅದನ್ನು ನಾವು ಪುರಸ್ಕರಿಸಬೇಕೆ? ಕಾನೂನು ಎತ್ತಿ ಹಿಡಿಯಲು ನಾವು ಪ್ರಮಾಣ ಸ್ವೀಕರಿಸಿದ್ದೇವೆ. ವಕೀಲರ ಸಮುದಾಯವನ್ನು ಸಂತುಷ್ಟಗೊಳಿಸಲು ನಾವು ಇಲ್ಲಿ ಕುಳಿತಿಲ್ಲ” ಎಂದು ಖಾರವಾಗಿ ಮೌಖಿಕವಾಗಿ ಹೇಳಿತು.

ಅಂತಿಮವಾಗಿ ಪೀಠವು “ತನಿಖೆಯು ನ್ಯಾಯಯುತ ಮತ್ತು ಸ್ವತಂತ್ರವಾಗಿ ನಡೆಯಬೇಕು. ನ್ಯಾಯದಾನ ಮಾಡಿದರಷ್ಟೇ ಸಾಲದು, ನ್ಯಾಯದಾನ ಮಾಡಲಾಗಿದೆ ಎಂಬುದು ಕಾಣಬೇಕು” ಎಂದು ಅಡ್ವೊಕೇಟ್‌ ಜನರಲ್‌ ಅವರನ್ನು ಕುರಿತು ಹೇಳಿತು.