Justices K Natarajan & Vijaykumar A. Patil 
ಸುದ್ದಿಗಳು

ಸಾಲ ಒಪ್ಪಂದದ ನಿಬಂಧನೆ, ನಿಯಮ ಮರು ರೂಪಿಸುವುದು ನ್ಯಾಯಾಲಯದ ಕೆಲಸವಲ್ಲ: ಹೈಕೋರ್ಟ್‌

ಒಟಿಎಸ್‌ ಒಪ್ಪಂದ ಪ್ರಕಾರ ಗಡುವು ಮುಗಿದ ಬಳಿಕವೂ ರೂ.20 ಲಕ್ಷ ಪಡೆದುಕೊಳ್ಳಲು ಆದೇಶಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಸ್‌ಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠ ಪುರಸ್ಕರಿಸಿದೆ.

Bar & Bench

“ಸಾಲ ಒಪ್ಪಂದದ ನಿಬಂಧನೆ ಮತ್ತು ನಿಯಮಗಳನ್ನು ಮರು ರೂಪಿಸುವುದು ನ್ಯಾಯಾಲಯದ ಕೆಲಸವಲ್ಲ” ಎಂದಿರುವ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಬಾಕಿ ಸಾಲ ಪಾವತಿಗೆ ಒಂದು ಬಾರಿಯ ತೀರುವಳಿ ಯೋಜನೆ (ಒಟಿಎಸ್‌) ರೂಪಿಸುವುದು ಬ್ಯಾಂಕುಗಳ ಕೆಲಸವಾಗಿರುವುದರಿಂದ ಅದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದು ಸ್ಪಷ್ಟವಾಗಿ ಹೇಳಿದೆ.

ಒಟಿಎಸ್‌ ಒಪ್ಪಂದ ಪ್ರಕಾರ ಗಡುವು ಮುಗಿದ ಬಳಿಕವೂ ರೂ.20 ಲಕ್ಷ ಪಡೆದುಕೊಳ್ಳಲು ಆದೇಶಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ನಟರಾಜನ್‌ ಮತ್ತು ವಿಜಯಕುಮಾರ್‌ ಎ.ಪಾಟೀಲ್‌ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.

“ನಿಗದಿತ ಕಾಲಾವಧಿಯನ್ನು ಮೀರಿ ಒಟಿಎಸ್‌ ಬಾಕಿ ಹಣವನ್ನು ಪಡೆಯಲು ಒಪ್ಪುವಂತೆ ಎಸ್‌ಬಿಐಗೆ ನಿರ್ದೇಶಿಸುವ ಮೂಲಕ ಏಕಸದಸ್ಯ ಪೀಠವು ಸಂಪೂರ್ಣವಾಗಿ ದೋಷಪೂರಿತ ಆದೇಶ ಮಾಡಿದೆ. ಈ ಕಾರಣಕ್ಕಾಗಿ ಮೇಲ್ಮನವಿ ಪುರಸ್ಕಾರಕ್ಕೆ ಅರ್ಹವಾಗಿದೆ. ಈ ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಅನೂರ್ಜಿತವಾಗಲಿದ್ದು, ಅದನ್ನು ಕೈಬಿಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಬಿಜನೂರು ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಪ್ರಕರಣದಲ್ಲಿ ಹೈಕೋರ್ಟ್‌ ಸಂವಿಧಾನದ 226ನೇ ವಿಧಿಯಡಿ ಲಭ್ಯವಿರುವ ಅಧಿಕಾರ ಬಳಸಿ ಯಾವುದೇ ಆದೇಶ ನೀಡುವಂತಿಲ್ಲ. ಲಭ್ಯವಿರುವ ಸಾಕ್ಷ್ಯ ಆಧರಿಸಿ ಸಾಲ ಮರುಪಾವತಿ ನ್ಯಾಯಮಂಡಳಿ (ಡಿಆರ್‌ಟಿ) ಸೂಕ್ತ ಆದೇಶ ಹೊರಡಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ” ಎಂದು ನ್ಯಾಯಾಲಯ ವಿವರಿಸಿದೆ.

ಸುಪ್ರೀಂ ಕೋರ್ಟ್‌ ರೂಪಿಸಿರುವ ಮಾರ್ಗಸೂಚಿಯ ಪ್ರಕಾರ ಒಟಿಎಸ್‌ ಗಡುವು ಮುಗಿದ ನಂತರ 20 ಲಕ್ಷ ರೂಪಾಯಿಗಳನ್ನು ಸ್ವೀಕರಿಸುವಂತೆ ಏಕಸದಸ್ಯ ಪೀಠ ಆದೇಶ ನೀಡಿರುವುದು ಕಾನೂನಿಗೆ ವಿರುದ್ಧ ಎಂದು ವಿಭಾಗೀಯ ಪೀಠ ಹೇಳಿದೆ. ಅಂತೆಯೇ, ಮೇಲ್ಮನವಿ ವಿಲೇವಾರಿ ಮಾಡಿರುವ ನ್ಯಾಯಾಲಯವು ಏಕ ಸದಸ್ಯ ಪೀಠದ ಆದೇಶ ಪಾಲಿಸಿಲ್ಲ ಎಂದು ಸಾಲಗಾರರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಇತ್ಯರ್ಥಪಡಿಸಿದೆ.

ಪ್ರಕರಣದ ಹಿನ್ನೆಲೆ: ಕಲಬುರ್ಗಿಯಲ್ಲಿ ಉದ್ಯಮ ನಡೆಸುತ್ತಿದ್ದ ಮಹಾಲಿಂಗಪ್ಪ ಹಾಗೂ ಅವರ ಮೂವರು ಪುತ್ರರಿಗೆ ಎಸ್‌ಬಿಐ 2017ರಲ್ಲಿ1.5 ಕೋಟಿ ರೂಪಾಯಿ ಸಾಲ ನೀಡಿತ್ತು. ಆ ಸಾಲಕ್ಕೆ ಕೆಲವು ಸ್ಥಿರಾಸ್ತಿಗಳನ್ನು ಶ್ಯೂರಿಟಿಯಾಗಿ ನೀಡಲಾಗಿತ್ತು. ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್‌, ಸರ್ಫೇಸಿ ಕಾಯಿದೆ 2002ರಡಿ ನೋಟಿಸ್‌ ಜಾರಿಗೊಳಿಸಿತ್ತು. ಆನಂತರ ಎಸ್‌ಬಿಐ, ಭದ್ರತೆಯಾಗಿ ನೀಡಿದ್ದ ಆಸ್ತಿಗಳನ್ನು ಸಾಂಕೇತಿಕವಾಗಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಆನಂತರ ಸಾಲಗಾರರು ಬ್ಯಾಂಕ್‌ಗೆ ಮನವಿ ಸಲ್ಲಿಸಿ, ತಮಗೆ ಒಟಿಎಸ್‌ ನೀಡಿದರೆ 2019ರ ಡಿಸೆಂಬರ್‌ 31ರೊಳಗೆ ಪೂರ್ತಿ ಹಣ ಪಾವತಿಸಲಾಗುವುದು ಎಂದು ಮನವಿ ಮಾಡಿದ್ದರು. ಅದಕ್ಕೆ ಬ್ಯಾಂಕ್‌ ಒಪ್ಪಿತ್ತು. ಆದರೆ, ನಿಗದಿತ ಅವಧಿಯಲ್ಲಿ ಒಟಿಎಸ್‌ನಂತೆ ಹಣ ಪಾವತಿ ಮಾಡಲಿಲ್ಲ. ಹೀಗಾಗಿ, ಎಸ್‌ಬಿಐ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಿಲ್ಲಾ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿತ್ತು. ನಂತರ ಸಾಲಗಾರರು ಹೈಕೋರ್ಟ್‌ ಏಕಸದಸ್ಯ ಪೀಠದ ಮೊರೆ ಹೋಗಿದ್ದರು.

SBI Vs Mahalingappa.pdf
Preview