High Court of Karnataka
High Court of Karnataka 
ಸುದ್ದಿಗಳು

ಕೇಂದ್ರ ಸರ್ಕಾರದ ಒಡೆತನದ ಆಸ್ತಿಗೆ ರಾಜ್ಯ ಸರ್ಕಾರಕ್ಕೆ ತೆರಿಗೆ ಪಾವತಿಸುವ ಅಗತ್ಯವಿಲ್ಲ: ಹೈಕೋರ್ಟ್‌

Bar & Bench

ಕೇಂದ್ರ ಸರ್ಕಾರದ ಒಡೆತನದ ಆಸ್ತಿಗೆ ರಾಜ್ಯ ಸರ್ಕಾರಕ್ಕೆ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದ್ದು, ಮಂಗಳೂರು ನಗರದಲ್ಲಿ ಕೇಂದ್ರ ಗಣಿ ಮತ್ತು ಕರಾವಳಿ ವಲಯಕ್ಕೆ ಸೇರಿದ ಸಿಬ್ಬಂದಿ ವಸತಿ ಗೃಹಕ್ಕೆ ಆಸ್ತಿ ತೆರಿಗೆ ಪಾವತಿಸಲು ಸೂಚಿಸಿ ಮಂಗಳೂರು ಮಹಾನಗರ ಪಾಲಿಕೆ ನೀಡಿದ ಎರಡು ನೋಟಿಸ್‌ಗಳನ್ನು ಈಚೆಗೆ ರದ್ದುಪಡಿಸಿದೆ.

ಮಂಗಳೂರು ನಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ 2010ರ ಜೂನ್‌ 4ರಂದು ಮತ್ತು 2011ರ ಜುಲೈ 16ರಂದು ಜಾರಿ ಮಾಡಿದ್ದ ನೋಟಿಸ್ ರದ್ದತಿ ಕೋರಿ ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

ಪಾಲಿಕೆಯು ವಸತಿ ಗೃಹ ನಿರ್ಮಾಣಕ್ಕೆ 1991ರ ಏಪ್ರಿಲ್‌ 26ರಂದು ಕೇಂದ್ರ ಸರ್ಕಾರಕ್ಕೆ ನಕ್ಷೆ ಮಂಜೂರಾತಿ ನೀಡಿತ್ತು. ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, 1994ರ ಜೂನ್‌ 10ರಂದು ಸ್ವಾಧೀನಾನುಭವ ಪತ್ರವನ್ನು ಪಾಲಿಕೆ ನೀಡಿದೆ. ಸಂವಿಧಾನದ 285ನೇ ವಿಧಿ ಪ್ರಕಾರ ಕೇಂದ್ರ ಸರ್ಕಾರದ ಆಸ್ತಿಗೆ ರಾಜ್ಯಕ್ಕೆ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಇದೆ. ಅದರಂತೆ ಕೇಂದ್ರ ಸರ್ಕಾರದ ಆಸ್ತಿಗೆ ರಾಜ್ಯ ಸರ್ಕಾರ ಅಥವಾ ಅದರ ಸ್ಥಳೀಯ ಸಂಸ್ಥೆಗಳು ತೆರಿಗೆ ವಿಧಿಸುವಂತಿಲ್ಲ ಎಂದು ಆದೇಶದಲ್ಲಿ ಪೀಠವು ತಿಳಿಸಿದೆ.

ಕೇಂದ್ರ ಸರ್ಕಾರದ ಗಣಿ ಮತ್ತು ಕರಾವಳಿ ಸರ್ವೇ (ಮಂಗಳೂರು) ವಲಯದ ಉಪ ಪ್ರಧಾನ ನಿರ್ದೇಶಕರು ತಮ್ಮ ಒಡೆತನದಲ್ಲಿ ಇರುವ ಸಿಬ್ಬಂದಿ ವಸತಿ ಗೃಹಕ್ಕೆ ಸಂಬಂಧಿಸಿದಂತೆ 1994-95ರಿಂದ 2008ರವರಗೆ ಅಂದರೆ ಒಟ್ಟು 13 ವರ್ಷಗಳಿಗೆ 2007 ಮತ್ತು 2008ರಲ್ಲಿ ಮೂರು ಬಾರಿ ಪ್ರತ್ಯೇಕವಾಗಿ ಒಟ್ಟು 4,42,675 ರೂಪಾಯಿಯನ್ನು ಪಾಲಿಕೆಗೆ ಪಾವತಿದ್ದಾರೆ. ತಿಳಿವಳಿಕೆಯಿಲ್ಲದೆ ಪಾವತಿಸಿರುವ ಆ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಕಲ್ಪಿಸಿರುವ ನಾಗರಿಕ ಸೌಲಭ್ಯಗಳಿಗೆ ಪ್ರತಿಯಾಗಿ ಪಾವತಿಸಬೇಕಿರುವ ಸೇವಾ ತೆರಿಗೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಮಂಗಳೂರು ನಗರ ಪಾಲಿಕೆಗೆ ನಿರ್ದೇಶಿಸಿರುವ ಪೀಠವು ಅರ್ಜಿ ಇತ್ಯರ್ಥಪಡಿಸಿದೆ.

ಮಂಗಳೂರು ನಗರದಲ್ಲಿ ಕಟ್ಟಡವನ್ನು ಹೊಂದಿದ್ದ ಕೇಂದ್ರ ಸರ್ಕಾರದ ಗಣಿ ಮತ್ತು ಕರಾವಳಿ ಸರ್ವೇ ವಲಯವು ಅದನ್ನು ತನ್ನ ಸಿಬ್ಬಂದಿಗೆ ವಸತಿ ಗೃಹವಾಗಿ ಬಳಸಿಕೊಂಡಿತ್ತು. ಅದಕ್ಕೆ ಆಸ್ತಿ ತೆರಿಗೆ ಪಾವತಿಸುವಂತೆ ಮಂಗಳೂರು ನಗರ ಪಾಲಿಕೆಯು 2010ರ ಜೂನ್‌ 4ರಂದು ಮತ್ತು 2011ರ ಜುಲೈ 16ರಂದು ಎರಡು ಪ್ರತ್ಯೇಕ ನೋಟಿಸ್ ಜಾರಿ ಮಾಡಿತ್ತು.

ತನ್ನ ಒಡೆತನದ ಕಟ್ಟಡಕ್ಕೆ ರಾಜ್ಯ ಸರ್ಕಾರಕ್ಕೆ ಆಸ್ತಿ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ ಎನ್ನುವ ಬಗ್ಗೆ ತಿಳಿವಳಿಕೆಯಿಲ್ಲದೆ ಕೇಂದ್ರ ಸರ್ಕಾರವು ಮಂಗಳೂರು ನಗರ ಪಾಲಿಕೆಗೆ 1994-95ರಿಂದ 2008ರ ಮಾರ್ಚ್‌ 31ರವರೆಗೆ 4,42,675 ರೂಪಾಯಿ ಆಸ್ತಿ ತೆರಿಗೆಯನ್ನು ತಪ್ಪಾಗಿ ಪಾವತಿಸಿತ್ತು. ನಂತರ ಆಸ್ತಿಗೆ ತೆರಿಗೆ ಪಾವತಿಗೆ ಸೂಚಿಸಿ ಮತ್ತೆ ನಗರ ಪಾಲಿಕೆ 2010 ಮತ್ತು 2011ರಲ್ಲಿ ಪಾಲಿಕೆ ಜಾರಿಗೊಳಿಸಿದ ನೋಟಿಸ್ ಅನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.