High Court of Karnataka 
ಸುದ್ದಿಗಳು

ಉದ್ಯೋಗದಿಂದ ವಜಾ ಮಾಡಿರುವುದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲು ಆಧಾರವಾಗದು: ಹೈಕೋರ್ಟ್‌

ಮಹಿಳೆಯೊಬ್ಬರು ತಮ್ಮ ವಿರುದ್ಧ ದಾಖಲಿಸಿದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬಸವನಗುಡಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್‌ಗಳಾದ ರಾಧಾಕೃಷ್ಣ ಮತ್ತು ಹನುಮಂತಯ್ಯ ಸಲ್ಲಿಸಿದ್ದ ಅರ್ಜಿಯನ್ನು ಪೀಠ ಮಾನ್ಯ ಮಾಡಿದೆ.

Bar & Bench

ಉದ್ಯೋಗದಿಂದ ವಜಾಗೊಳಿಸಿರುವುದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಕ್ಕೆ ಆಧಾರವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಇಬ್ಬರು ಪೋಸ್ಟ್‌ ಮಾಸ್ಟರ್‌ಗಳ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ್ದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ದೂರನ್ನು ರದ್ದುಪಡಿಸಿದೆ.

ಮಹಿಳೆಯೊಬ್ಬರು ತಮ್ಮ ವಿರುದ್ಧ ದಾಖಲಿಸಿದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬಸವನಗುಡಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್‌ಗಳಾದ ರಾಧಾಕೃಷ್ಣ ಮತ್ತು ಹನುಮಂತಯ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ದೂರು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆ ಪರಿಗಣಿಸಿದ ಪೀಠವು ರಾಧಾಕೃಷ್ಣ ಅವರು ಕಾರಿನಲ್ಲಿ ದೂರುದಾರೆಯನ್ನು 8ನೇ ಮೈಲಿಯ ಉದ್ಯಾನಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದರು. ಕೆಲ ವ್ಯಕ್ತಿಗಳು ಆತನನ್ನು ತಡೆದರು ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಆದರೆ, ಪೊಲೀಸರು 8ನೇ ಮೈಲಿಯ ಉದ್ಯಾನಕ್ಕೆ ತೆರಳಿ, ಆ ಉದ್ಯಾನ ಇದೆಯೇ ಅಥವಾ ಇಲ್ಲವೇ? ಅಲ್ಲಿ ಸಿಸಿಟಿವಿ ಅಳವಡಿಸಲಾಗಿದೆಯೇ? ಅದರ ದೃಶ್ಯಗಳನ್ನು ಪಡೆದು ವಾಸ್ತವವಾಗಿ ರಾಧಾಕೃಷ್ಣ ಮತ್ತು ದೂರುದಾರೆಯು ಉದ್ಯಾನಕ್ಕೆ ಭೇಟಿ ನೀಡಿದ್ದರೇ? ಅಥವಾ ಇಲ್ಲವೇ? ಎಂಬ ಬಗ್ಗೆ ತನಿಖೆ ನಡೆಸಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ರಾಧಾಕೃಷ್ಣ ಅವರ ಚೇಂಬರ್‌ಗೆ ಒಬ್ಬಂಟಿಯಾಗಿ ಬಂದು ಮಾತನಾಡುವಂತೆ ವಿನಯ್ ಎಂಬಾತ ದೂರುದಾರೆಗೆ ಸೂಚಿಸಿದ್ದ ಎನ್ನಲಾಗಿದೆ. ಆ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿಲ್ಲ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಂತ್ರಸ್ತೆ ಮತ್ತು ಆಕೆಯ ತಾಯಿಯ ಪ್ರಮಾಣೀಕೃತ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು ಬಿಟ್ಟರೆ ಪೊಲೀಸರು ಬೇರೇ ಯಾವುದೇ ಸಾಕ್ಷಿಯನ್ನು ಪರೀಕ್ಷಿಸಿಲ್ಲ. ಅರ್ಜಿದಾರರ ಮೇಲಿನ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಪೂರಕ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಒದಗಿಸಿಲ್ಲ. ಅಂಚೆ ಕಚೇರಿಯ ಉಸ್ತುವಾರಿ ಅಧಿಕಾರಿಯು ಕೆಲಸದಿಂದ ತೆಗೆದು ಹಾಕಿದರು ಎಂಬುದು ದೂರು ದಾಖಲಿಸಲು ಆಧಾರವಾಗುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಈ ಹಿನ್ನೆಲೆಯಲ್ಲಿ ಆರೋಪಿ ಅಧಿಕಾರಿಯನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ನ್ಯಾಯಾಲಯಕ್ಕೆ ಎಳೆದು ತರಲಾಗುವುದಿಲ್ಲ. ಮೇಲಾಗಿ ಸಂತ್ರಸ್ತೆ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಸಾಕ್ಷಿಗಳ ಪೂರಕ ಸಾಕ್ಷ್ಯವಿಲ್ಲ. ಭಾರತೀಯ ದಂಡ ಸಂಹಿತೆ ಸೆಕ್ಷನ್ 354(1) ಅರ್ಜಿದಾರರ ಮೇಲೆ ಮಾಡಲಾದ ಲೈಂಗಿಕ ಶೋಷಣೆ ಆರೋಪಕ್ಕೆ ಅನ್ವಯಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರರ ವಿರುದ್ಧದ ದೂರು ಮತ್ತು ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ದೂರುದಾರೆಯು 2018ರ ಮೇ 16ರಂದು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ತಾಯಿ ಬಸವನಗುಡಿ ಅಂಚೆ ಕಚೇರಿಯಲ್ಲಿ ಗುತ್ತಿಗೆ ಉದ್ಯೋಗಿಯಾಗಿದ್ದರು. ಅನಾರೋಗ್ಯಕ್ಕೆ ಅವರು ಗುರಿಯಾದಾಗ ನಾನು ಅಂಚೆ ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದೆ. ರಾಧಾಕೃಷ್ಣ ಅವರು ಕಳೆದ ಹತ್ತು ವರ್ಷಗಳಿಂದ ಪೋಸ್ಟ್ ಮಾಸ್ಟರ್ ಆಗಿದ್ದರು. ತರುವಾಯ ಹನುಮಂತಯ್ಯ ಪೋಸ್ಟ್ ಮಾಸ್ಟರ್ ಆದರು. ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿ ನನಗೆ ಹನುಮಂತಯ್ಯ ಅವಮಾನಿಸುತ್ತಿದ್ದರು. ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ದೂರಿದ್ದರು.

ಕ್ಷಮೆ ಕೇಳಿದ ಹೊರತಾಗಿಯೂ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕುವುದನ್ನು ಮುಂದುವರಿಸುತ್ತಿದ್ದರು. ಇದರಿಂದ ಬೇಸರಗೊಂಡು ಮಹಡಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಕಚೇರಿ ಸಿಬ್ಬಂದಿ ವಾಪಸ್ ಕರೆತಂದಿದ್ದರು. ನಂತರ ಹನುಮಂತಯ್ಯ ನನ್ನ ಬಳಿಕ ಲೈಂಗಿಕ ಆಸೆ ವ್ಯಕ್ತಪಡಿಸಿದ್ದು, ಅದನ್ನು ತಿರಸ್ಕರಿಸಿದೆ. ರಾಧಾಮಕೃಷ್ಣ ಅವರು ನನ್ನನ್ನು ಕಾರಿನಲ್ಲಿ ಬೆಂಗಳೂರಿನ 8ನೇ ಮೈಲಿಯ ಬಳಿಯ ಉದ್ಯಾನಕ್ಕೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದರು. ಆ ಸಂದರ್ಭದಲ್ಲಿ ಒಬ್ಬರು ಬಂದು ರಾಧಕೃಷ್ಣ ಅವರನ್ನು ತಡೆದರು. ಅಲ್ಲಿಂದ ನಾನು ಹೊರಟು ಬಂದೆ ಎಂದು ದೂರುದಾರೆ ಆರೋಪಿಸಿದ್ದರು.

ಇದರಿಂದ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು, ರಾಧಾಕೃಷ್ಣ ಮತ್ತು ಹನುಮಂತಯ್ಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದರು. ಪ್ರಕರಣವು 37ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಹೀಗಾಗಿ, ಅವರು ದೂರಿನ ರದ್ದತಿಗೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.