ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್ ಅಲಿಯಾಸ್ ಹರ್ಷವರ್ಧಿನಿ ರನ್ಯಾ ವಿರುದ್ದ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆಯ (ಕಾಫಿಪೋಸಾ) ವಿವಿಧ ಸೆಕ್ಷನ್‌ಗಳನ್ನು ಅನ್ವಯಿಸಿರುವುದನ್ನು ಪ್ರಶ್ನಿಸಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ಕಾಫಿಪೋಸಾ ಕಾಯಿದೆ ಅಡಿ ರನ್ಯಾ ಬಂಧನ ಪ್ರಶ್ನಿಸಿ ಆಕೆಯ ಮಲತಾಯಿ ಎಚ್ ಪಿ ರೋಹಿಣಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಚ್ ಪಿ ಸಂದೇಶ್ ಮತ್ತು ರಾಮಚಂದ್ರ ಡಿ.ಹುದ್ದಾರ್ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.
“ಅರ್ಜಿದಾರರು ಮತ್ತು ಪ್ರತಿವಾದಿಗಳ ವಾದ ಆಲಿಸಲಾಗಿದ್ದು, ಪ್ರತಿವಾದಿಗಳು ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಲಾಗಿದೆ” ಎಂದು ಆದೇಶಿಸಿತು.
ರೋಹಿಣಿ ಪರ ವಕೀಲ ಕೆ ಚಂದ್ರಶೇಖರ್ ಅವರು “ಕಾಫಿಪೋಸಾ ಕಾಯಿದೆ ಅಡಿ ಬಂಧನ ಆದೇಶವನ್ನು ಏಪ್ರಿಲ್ 22ರಂದು ಮಾಡಲಾಗಿದ್ದು, ಮಾರನೇಯ ದಿನ ಅದನ್ನು ರನ್ಯಾಗೆ ನೀಡಲಾಗಿದೆ. ಈ ನಡುವೆ ರನ್ಯಾ ಅವರು ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ಯಾವುದೇ ಅವಕಾಶ ನೀಡದಿರುವುದು ಸಂವಿಧಾನದ 22ನೇ ವಿಧಿಯ ಉಲ್ಲಂಘನೆಯಾಗಿದೆ. ಇಡೀ ಬಂಧನ ಆದೇಶವು ಅಕ್ರಮವಾಗಿದೆ” ಎಂದು ವಾದಿಸಿದರು.
“ಬಂಧನ ಆದೇಶ ಮತ್ತು ಬಂಧನಕ್ಕೆ ನೀಡಿರುವ ಆಧಾರಗಳು ದೋಷಪೂರಿತ ಮತ್ತು ಅಕ್ರಮವಾಗಿದ್ದು, ವಿವೇಚನಾರಹಿತವಾಗಿವೆ. ಹೀಗಾಗಿ, ಬಂಧನವು ಅಕ್ರಮವಾಗಿದೆ. ರನ್ಯಾ ವಿರುದ್ಧ ಕಾಫಿಪೋಸಾ ಕಾಯಿದೆ ಅನ್ವಯಿಸುವಾಗ ಹಲವು ದಾಖಲೆಗಳನ್ನು ಆಧರಿಸಲಾಗಿದೆ. ಇದರಲ್ಲಿ ಪೆನ್‌ಡ್ರೈವ್ ಸಹ ಸೇರಿದೆ. ಆದರೆ, ಅದನ್ನು ರನ್ಯಾಗೆ ಒದಗಿಸಲಾಗಿಲ್ಲ. ಆಕೆಗೆ ತಿಳಿಯುವ ಭಾಷೆಯಲ್ಲಿ ದಾಖಲೆಗಳನ್ನು ಒದಗಿಸಲಾಗಿಲ್ಲ. ರನ್ಯಾ ಅವರ ಪಾಸ್‌ಪೋರ್ಟ್ ನ್ಯಾಯಾಲಯದ ವಶದಲ್ಲಿರುವಾಗ ಆಕೆ ದೇಶ ತೊರೆಯುವ ಅಥವಾ ಕಳ್ಳ ಸಾಗಣೆಯಲ್ಲಿ ತೊಡಗುವ ಸಾಧ್ಯತೆ ಕ್ಷೀಣ. ಈ ನೆಲೆಯಲ್ಲೂ ಕಾಫಿಪೋಸಾ ಕಾಯಿದೆಯು ಕಾನೂನುಬಾಹಿರವಾಗುತ್ತದೆ” ಎಂದು ವಾದಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿ ಭೂಷಣ್ ಅವರು “ಆಕ್ಷೇಪಣೆ ಸಲ್ಲಿಸಲು ತಿಂಗಳು ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು.
ಪ್ರಕರಣದ ಹಿನ್ನೆಲೆ: ಮಾರ್ಚ್ 3ರ ಸಂಜೆ 6.30ಕ್ಕೆ ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್ ವಿಮಾನದಲ್ಲಿ ಬಂದಿಳಿದಿದ್ದ ರನ್ಯಾರನ್ನು ಡಿಆರ್‌ಐ ಅಧಿಕಾರಿಗಳು ಪರಿಶೀಲಿಸಿದ್ದರು. ಮೊದಲಿಗೆ ರನ್ಯಾ ಅವರ ಕೈ ಚೀಲವನ್ನು (ಹ್ಯಾಂಡ್ ಬ್ಯಾಗ್) ಪರಿಶೀಲಿಸಲಾಗಿ, ಅದರಲ್ಲಿ ಏನೂ ಪತ್ತೆಯಾಗಿರಲಿಲ್ಲ. ಹೀಗಾಗಿ, ಮಹಿಳಾ ಡಿಆರ್‌ಐ ತನಿಖಾಧಿಕಾರಿಯು ರನ್ಯಾರನ್ನು ಪರಿಶೀಲಿಸುವ ಉದ್ದೇಶದಿಂದ ಲಿಖಿತವಾಗಿ ಒಪ್ಪಿಗೆ ಪಡೆದಿದ್ದರು. ಈ ಸಂದರ್ಭದಲ್ಲಿ ಆಕೆಯ ನಡುವಿನ ಭಾಗ, ಮಂಡಿಯ ಕೆಳಭಾಗದಲ್ಲಿ ತೊಡೆಗೆ ಚಿನ್ನದ ಬಾರ್‌ಗಳನ್ನು ಮೆಡಿಕಲ್ ಅಡ್ಹೆಸಿವ್ ಬ್ಯಾಂಡೇಜ್ ಬಳಸಿ ಅಂಟಿಸಲಾಗಿತ್ತು. ತಪಾಸಣೆಯ ಸಂದರ್ಭದಲ್ಲಿ ರನ್ಯಾ ಬಳಿ ₹12,56,43,362 ಮೌಲ್ಯದ 14213.05 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ್ಟಮ್ಸ್ ಕಾಯಿದೆ 1962ರ ಸೆಕ್ಷನ್ 135 (1)(a) ಮತ್ತು 135(1)(b) ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ, ಬೆಂಗಳೂರಿನ ಸತ್ರ ನ್ಯಾಯಾಲಯ ಮತ್ತು ಹೈಕೋರ್ಟ್ ಜಾಮೀನು ನಿರಾಕರಿಸಿವೆ.