Marriage
Marriage 
ಸುದ್ದಿಗಳು

ಮದುವೆಯಾದಾಗ ವಧುವಿಗೆ 18 ವರ್ಷ ಆಗಿರಲಿಲ್ಲ ಎಂಬ ಕಾರಣಕ್ಕೆ ವಿವಾಹ ಅನೂರ್ಜಿತಗೊಳಿಸಿದ್ದ ಆದೇಶ ರದ್ದುಪಡಿಸಿದ ಹೈಕೋರ್ಟ್‌

Bar & Bench

ಮದುವೆಯಾದ ವೇಳೆ 18 ವರ್ಷ ತುಂಬಿರಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರ ವಿವಾಹ ಅನೂರ್ಜಿತಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಲು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ: ಮಂಡ್ಯ ಜಿಲ್ಲೆಯ ಸುಶೀಲಾ ಅವರು ಮಂಜುನಾಥ್ ಅವರೊಂದಿಗೆ ಹಿಂದೂ ವಿವಾಹ ಕಾಯಿದೆ ಪ್ರಕಾರ 2012ರ ಜೂನ್‌ 15ರಂದು ಮದುವೆಯಾಗಿದ್ದರು. ತದನಂತರ ಮದುವೆಯಾಗುವಾಗ ತಮ್ಮ ಪತ್ನಿ ಅಪ್ರಾಪ್ತೆಯಾಗಿದ್ದರು. ಆಕೆಯ ಜನ್ಮ ದಿನಾಂಕ 06.09.1995 ಆಗಿತ್ತು ಎಂಬ ವಿಷಯ ಪತಿಗೆ ತಿಳಿದು ಬಂತು. ಆಗ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತಿ, ತಮ್ಮ ಮದುವೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿದ್ದರು.

ಇದನ್ನು ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ, ಹಿಂದೂ ವಿವಾಹ ಕಾಯಿದೆ-1955ರ ಸೆಕ್ಷನ್ 5(3)ರಂತೆ ಮದುವೆಯಾಗಲು ಮಧುವಿಗೆ 18 ವರ್ಷ ಆಗಿರಬೇಕು. ಪ್ರಕರಣದಲ್ಲಿ ಮದುವೆ ಆದ ಸಮಯದಲ್ಲಿ ಪತ್ನಿಗೆ 16 ವರ್ಷ 11 ತಿಂಗಳು 8 ದಿನ ಆಗಿತ್ತು. ಅಂದರೆ ಮದುವೆಯಾದಾಗ ಆಕೆ ಅಪ್ತಾಪ್ತರಾಗಿದ್ದರು. ಆ ಕಾರಣಕ್ಕೆ ವಿವಾಹ ಕಾಯಿದೆಯ ಸೆಕ್ಷನ್ 11ರ ಪ್ರಕಾರ ಊರ್ಜಿತವಾಗುವುದಿಲ್ಲ ಎಂದು ತಿಳಿಸಿತ್ತು.

ಅಲ್ಲದೆ, ಸುಶೀಲಾ ಮತ್ತು ಮಂಜುನಾಥ್ ಅವರ ಮದುವೆಯನ್ನು ಅನೂರ್ಜಿತಗೊಳಿಸಿ 2015ರ ಜನವರಿ 8ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸಲು ಕೋರಿ ಸುಶೀಲಾ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 5(3) ಪ್ರಕಾರ ಮದುವೆ ಸಂದರ್ಭದಲ್ಲಿ ವರನ ವಯಸ್ಸು 21 ಮತ್ತು ವಧುವಿನ ವಯಸ್ಸು 18 ಇರಬೇಕು. ಆದರೆ, ಸೆಕ್ಷನ್‌ 11ರ ಅಡಿ ವಿವಾಹವನ್ನು ರದ್ದುಪಡಿಸಬೇಕಾದರೆ ಕಾಯಿದೆಯ ಸೆಕ್ಷನ್ 5ರ ನಿಯಮ 1, 4 ಮತ್ತು 5ಕ್ಕೆ ವಿರುದ್ಧವಾಗಿರಬೇಕು. ಮದುವೆಯಾದಾಗ 18 ವರ್ಷ ಆಗಿರಬೇಕು ಎಂಬ ನಿಯಮವನ್ನು ಸೆಕ್ಷನ್ 11ರ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದ್ದರಿಂದ ಅಪ್ರಾಪ್ತೆ ಎಂಬ ಕಾರಣಕ್ಕೆ ಸೆಕ್ಷನ್ 11 ಪ್ರಕಾರ ವಿವಾಹ ಅನೂರ್ಜಿತಗೊಳಿಸುವುದು ಈ ಪ್ರಕರಣಕ್ಕೆ ಅನ್ವಯಿಸದು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಈ ಆಧಾರದಲ್ಲಿ ಮೇಲ್ಮನವಿದಾರರ ವಿವಾಹ ಅನೂರ್ಜಿತವಲ್ಲ ಎಂದು ಆದೇಶಿಸಿರುವ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.