“ಜಾತ್ಯತೀತತೆ ಎಂದರೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹೊರಗಿಡುವುದಲ್ಲ” ಎಂದು ಈಚೆಗೆ ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಬೆಂಗಳೂರಿನ ವೈಯಾಲಿಕಾವಲ್‌ನ ಸ್ಯಾಂಕಿ ಪಾರ್ಕ್‌ನ ಯೋಗ ಸಭಾಂಗಣದಲ್ಲಿ ಶಂಕರ ಜಯಂತಿ ಆಚರಣೆಗೆ ಅನುಮತಿ ನಿರಾಕರಿಸಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.
ಶಂಕರ ಜಯಂತಿ ಆಚರಣೆಗೆ ಅನುಮತಿ ನಿರಾಕರಿಸಿದ್ದ ಪಶ್ಚಿಮ ನಗರ ಪಾಲಿಕೆ ನಿರ್ಧಾರ ಪ್ರಶ್ನಿಸಿ ಮಲ್ಲೇಶ್ವರಂ ಬ್ರಾಹ್ಮಣ ಸಭಾ ಟ್ರಸ್ಟ್‌ನ ಕಾರ್ಯದರ್ಶಿ ಕೌಶಿಕ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಇತ್ಯರ್ಥಪಡಿಸಿದ್ದು, ಅರ್ಜಿದಾರರ ಮನವಿಯನ್ನು ಐದು ದಿನಗಳಲ್ಲಿ ಮರುಪರಿಗಣಿಸುವಂತೆ ನಿರ್ದೇಶಿಸಿದೆ.
“ಶಂಕರಾಚಾರ್ಯರು ಭಾರತದ ಅತ್ಯಂತ ಗೌರವಾನ್ವಿತ ಆಚಾರ್ಯರಲ್ಲಿಒಬ್ಬರು ಮತ್ತು ಅವರು ಪ್ರಚಾರ ಮಾಡಿದ ಅದ್ವೈತ ಸಿದ್ಧಾಂತವು ದೇಶದ ಪ್ರಮುಖ ತಾತ್ವಿಕ ಸಂಪ್ರದಾಯಗಳಲ್ಲಿಒಂದಾಗಿದೆ. ಶಂಕರಾಚಾರ್ಯ ಜಯಂತಿ ಆಚರಣೆಯನ್ನು ಈ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಎರಡೂ ರೀತಿಯಲ್ಲಿ ಪರಿಗಣಿಸಬೇಕಾಗಿದೆ. ಭಾರತ ಜಾತ್ಯತೀತ ದೇಶವಾಗಿದ್ದರೂ, ದೇಶದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಚರಿಸುವುದಿಲ್ಲ ಎಂದು ಅದರ ಅರ್ಥವಲ್ಲ” ಎಂದು ಪೀಠ ಹೇಳಿದೆ.
“ಭಾರತೀಯ ನಾಗರಿಕತೆಯ ಶ್ರೇಷ್ಠತೆಯು ಅದರ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಬೆಸೆದುಕೊಂಡಿದೆ. ಅದನ್ನು ತೆಗೆದುಹಾಕುವುದು ದೇಶದಿಂದ ಆತ್ಮ ತೆಗೆದುಹಾಕುವುದಕ್ಕೆ ಸಮಾನವಾಗಿದೆ. ಭಾರತದ ಸಂವಿಧಾನವು ಭಾರತೀಯ ನಾಗರಿಕತೆಯ ಮುದ್ರೆಗಳು, ಅವು ಭಾರತೀಯ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾದ ಗುರುಕುಲ, ರಾಮಾಯಣ, ಭಗವದ್ಗೀತೆ, ಗೌತಮ ಬುದ್ಧ, ಮಹಾವೀರ ಸ್ವಾಮಿ ಮತ್ತಿತರವುಗಳನ್ನು ಒಳಗೊಂಡಿದೆ. ಹೀಗಾಗಿ ಧರ್ಮದೊಂದಿಗೆ ಅಂತರ್ಗತವಾಗಿ ಬೆಸೆದುಕೊಂಡಿರುವ ಭಾರತೀಯ ಸಂಸ್ಕೃತಿಯ ಆಚರಣೆಯನ್ನು ಎಂದಿಗೂ ಕಾನೂನುಬಾಹಿರ ಅಥವಾ ಸಂವಿಧಾನಬಾಹಿರ ಎಂದು ಪರಿಗಣಿಸಲಾಗದು. ವಾಸ್ತವವಾಗಿ, ಅದರಲ್ಲಿರುವ ಒಳ್ಳೆಯತನವನ್ನು ಸಮಾಜದ ಸುಧಾರಣೆಗಾಗಿ ಸಕ್ರಿಯವಾಗಿ ಉತ್ತೇಜಿಸಬೇಕಾಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಹೀಗಾಗಿ, “ಶಂಕರಾಚಾರ್ಯರ ಜಯಂತಿಗೆ ಅನುಮತಿ ನೀಡದೆ ಪಶ್ಚಿಮ ಪಾಲಿಕೆ ಹಿಂಬರಹ ನೀಡಿರುವುದಕ್ಕೆ ಯಾವುದೇ ಆಧಾರವಿಲ್ಲ. ಆ ರೀತಿ ಧಾರ್ಮಿಕ ಜಯಂತಿ ನಿಷೇಧಕ್ಕೆ ಸರ್ಕಾರಿ ನೀತಿಯೂ ಇಲ್ಲ. ಆದ್ದರಿಂದ, ಪಾಲಿಕೆ ಆದೇಶ ಏಕಪಕ್ಷೀಯ ಹಾಗೂ ಸಕಾರಣವಿಲ್ಲ ಎಂದು ಅದನ್ನು ರದ್ದುಗೊಳಿಸಲಾಗುವುದು” ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಮಲ್ಲೇಶ್ವರಂ ಬ್ರಾಹ್ಮಣ ಸಭಾ ಟ್ರಸ್ಟ್ ಏಪ್ರಿಲ್ 21ರಂದು ಸ್ಯಾಂಕಿ ಕರೆಯ ಆವರಣದ ಯೋಗ ಸಭಾಂಗಣದಲ್ಲಿ ಶಂಕರ ಜಯಂತಿ ನಡೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಗೆ ಅನುಮತಿ ಕೋರಿದ್ದರು. ಆದರೆ, ಸಭಾಂಗಣದಲ್ಲಿ ಧಾರ್ಮಿಕ ಚಟುವಟಿಕೆ ನಡೆಸಲು ಅನುಮತಿ ನೀಡಲಾಗದು ಎಂದು ಪಶ್ಚಿಮ ಪಾಲಿಕೆ ಹಿಂಬರಹ ನೀಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಟ್ರಸ್ಟ್, ಸಭಾಂಗಣದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಿರ್ಬಂಧಿಸಲು ಯಾವುದೇ ನಿಯಮ ಹಾಗೂ ನಿಬಂಧನೆಗಳಿಲ್ಲ. ಆದರೂ ಸಹ ಏಕಪಕ್ಷೀಯವಾಗಿ ಆದೇಶ ಹೊರಡಿಸಲಾಗಿದೆ ಎಂದು ಆಕ್ಷೇಪಿಸಿತ್ತು.