Sushil Panduranga Mantri  and Karnataka HC
Sushil Panduranga Mantri and Karnataka HC 
ಸುದ್ದಿಗಳು

ಗ್ರಾಹಕರಿಗೆ ವಂಚನೆ ಪ್ರಕರಣ: ಉದ್ಯಮಿ ಸುಶೀಲ್‌ ಮಂತ್ರಿ, ಪುತ್ರ ಪ್ರತೀಕ್‌ ವಿರುದ್ಧದ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

Bar & Bench

ಗ್ರಾಹಕರಿಗೆ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಮಂತ್ರಿ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕ ಸುಶೀಲ್‌ ಪಾಂಡುರಂಗ ಮಂತ್ರಿ ಮತ್ತು ಅವರ ಪುತ್ರ ಪ್ರತೀಕ್‌ ಮಂತ್ರಿ ವಿರುದ್ಧ ಅಪರಾಧ ತನಿಖಾ ದಳ (ಸಿಐಡಿ) ನಡೆಸುತ್ತಿರುವ ಎಲ್ಲಾ ಪ್ರಕ್ರಿಯೆಗೆ ಬುಧವಾರ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ.

ಅರ್ಜಿದಾರರ ವಿರುದ್ಧದ ಇಂಥದ್ದೇ ಪ್ರಕರಣಗಳಲ್ಲಿ ನ್ಯಾಯಾಲಯವು ಹಿಂದೆ ಮಾಡಿರುವ ಆದೇಶಕ್ಕೆ ಪೂರಕವಾಗಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಸಕದಸ್ಯ ಪೀಠವು ಈ ಆದೇಶ ಮಾಡಿದೆ.

“ಸಂಬಂಧಿತ ಪ್ರಕರಣಗಳಲ್ಲಿ ನ್ಯಾಯಾಲಯವು ಮಧ್ಯಂತರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ನ್ಯಾಯಾಲಯದ ಮುಂದಿರುವ ಅಪರಾಧ ಸಂಖ್ಯೆ 72/2020ಗೆ ಸಂಬಂಧಿಸಿದಂತೆ ತನಿಖೆಗೆ ಮಧ್ಯಂತರ ತಡೆ ನೀಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಮಂತ್ರಿ ಡೆವಲಪರ್ಸ್‌, ಸುಶೀಲ್‌ ಪಾಂಡುರಂಗ ಮಂತ್ರಿ ಮತ್ತು ಪ್ರತೀಕ್‌ ಮಂತ್ರಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶ್ಯಾಮಸುಂದರ್‌ ಅವರು “ಇಂಥದ್ದೇ ಇತರೆ 14 ಪ್ರಕರಣಗಳಲ್ಲಿನ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿದೆ. ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ ಔಪಚಾರಿಕವಾಗಿ ಮುಂಚಿತವಾಗಿ ನೋಟಿಸ್‌ ನೀಡದೆಯೇ ಸಿಐಡಿ ಪೊಲೀಸರು ಸೆಪ್ಟೆಂಬರ್‌ 9ರಂದು ಅರ್ಜಿದಾರರನ್ನು ಬಂಧಿಸಿದ್ದಾರೆ” ಎಂದು ಆಕ್ಷೇಪಿಸಿದರು.

ಪ್ರಕರಣದ ಹಿನ್ನೆಲೆ: 2020ರ ಆಗಸ್ಟ್‌ 29ರಂದು ಅನಿಲ್‌ ಕುಮಾರ್‌ ಎಂಬವರು ನೀಡಿದ ದೂರನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಈ ಸಂಬಂಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 120ಬಿ, 406, 409, 420 ಜೊತೆಗೆ 34 ಹಾಗೂ ಅನಿಯಂತ್ರಿತ ಠೇವಣಿ ಯೋಜನೆ (BUDS) ಕಾಯಿದೆ ಸೆಕ್ಷನ್‌ಗಳಾದ 21, 22 ಮತ್ತು 25ರ ಅಡಿ ಪ್ರಕರಣ ಸುಶೀಲ್‌ ಮಂತ್ರಿ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.