School children 
ಸುದ್ದಿಗಳು

ತಡವಾಗಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಿಸಿಲು ಕಾಯುವ ಶಿಕ್ಷೆ: ಪ್ರಾಂಶುಪಾಲೆ ಸೇರಿ ನಾಲ್ವರ ವಿರುದ್ಧದ ಪ್ರಕರಣಕ್ಕೆ ತಡೆ

ಒಂದೊಮ್ಮೆ ಬೇರೆ ವಿದ್ಯಾರ್ಥಿಗಳು ದೂರಿದರೆ ಮಧ್ಯಂತರ ಆದೇಶ ತೆರವು ಮಾಡಲಾಗುವುದು ಎಂದು ನ್ಯಾಯಾಲಯ ಮೌಖಿಕವಾಗಿ ಅರ್ಜಿದಾರರಿಗೆ ಎಚ್ಚರಿಸಿದೆ.

Bar & Bench

ವಿದ್ಯಾರ್ಥಿಗಳು ಶಾಲೆಗೆ ತಡವಾಗಿ ಬಂದಿದ್ದಕ್ಕೆ ಬಸ್ಕಿ ಹೊಡೆಸುವ ಮತ್ತು ಶಾಲೆಯ ಆವರಣ ಸುತ್ತು ಹಾಕುವ ಶಿಕ್ಷೆ ನೀಡಿದ ಆರೋಪದ ಮೇಲೆ ಪ್ರಾಂಶುಪಾಲೆ ಮತ್ತು ಇತರೆ ಮೂವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ. ಒಂದೊಮ್ಮೆ ಬೇರೆ ವಿದ್ಯಾರ್ಥಿಗಳು ದೂರಿದರೆ ಮಧ್ಯಂತರ ಆದೇಶ ತೆರವು ಮಾಡಲಾಗುವುದು ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತು.

ಬೆಂಗಳೂರಿನ ಟೆಕ್ನೋ ಶಾಲೆಯ ಪ್ರಾಂಶುಪಾಲೆ ಮೀನಾಕ್ಷಿ ವಿನೋಧಿನಿ, ಶಿಕ್ಷಕರಾದ ರಾಯಚೋಟಿ ನರೇಶ್‌, ಕೆ ಭರತ್‌ ಕುಮಾರ್‌ ಮತ್ತು ಎಸ್‌ ಶ್ರೀನಿವಾಸ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲ ಅರ್ಣವ್‌ ಬಾಗಲವಾಡಿ “ಕೆಲವು ವಿದ್ಯಾರ್ಥಿಗಳು ಶಾಲೆಗೆ ತಡವಾಗಿ ಬಂದಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಪ್ರಾಂಶುಪಾಲೆ-ಪೋಷಕರ ನಡುವಿನ ಸಂಭಾಷಣೆಯ ವಿಡಿಯೊ ವೈರಲ್‌ ಆಗಿದೆ. ಶಿಕ್ಷಕರ ವಿರುದ್ಧ ಮಕ್ಕಳು ದೂರು ನೀಡುವಂತೆ ಬಲವಂತ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮಕ್ಕಳಿಗೆ ಯಾವುದೇ ಶಿಕ್ಷೆ ನೀಡಿಲ್ಲ. ಪೋಷಕರನ್ನು ಕರೆದುಕೊಂಡು ಬರುವಂತೆ ಶಿಕ್ಷಕರು ಸೂಚಿಸಿದ್ದರು. ಇದು ಹಾನಿ ಮಾಡುವ ಉದ್ದೇಶ ಹೇಗಾಗುತ್ತದೆ?” ಎಂದರು.

ಆಗ ಪೀಠವು “ಮಕ್ಕಳಿಗೆ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಎರಡು ನಿಮಿಷ ತಡವಾಗಿದ್ದಕ್ಕೆ ಎರಡು ಗಂಟೆ ಬಿಸಿಲಿನಲ್ಲಿ ನಿಲ್ಲಿಸಿದ್ದಾರೆ ಎನ್ನುವುದು ಆರೋಪ” ಎಂದಿತು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಲಾಗುವುದು” ಎಂದರು.

ಇದನ್ನು ಆಲಿಸಿದ ಪೀಠವು ಪ್ರಕರಣಕ್ಕೆ ತಡೆ ನೀಡಲಾಗಿದೆ ಎಂದಿತು. ಅಲ್ಲದೇ, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: 2026ರ ಮಾರ್ಚ್‌ 13ರಂದು ಏಳನೇ ತರಗತಿಯಿಂದ 10ನೇ ತರಗತಿಯ ಏಳು ವಿದ್ಯಾರ್ಥಿಗಳು ತಡವಾಗಿ ಶಾಲೆಗೆ ಬಂದಿದ್ದರಿಂದ ಅವರನ್ನು ತರಗತಿಗೆ ಸೇರಿಸದೇ ಆವರಣದಲ್ಲಿ ನಿಲ್ಲಿಸಲಾಗಿತ್ತು ಎಂದು ಬೆಂಗಳೂರಿನ ಯಲಹಂಕ ಉಪನಗರದ ತಿರುಮಲ ನಗರದಲ್ಲಿರುವ ಚೈತನ್ಯ ಟೆಕ್ನೋ ಶಾಲೆಯ ವಿರುದ್ಧ ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಮಕ್ಕಳ ಹಕ್ಕುಗಳ ಆಯೋಗ ಭೇಟಿ ನೀಡಿ ಬಾದಿತ ವಿದ್ಯಾರ್ಥಿಗಳ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ವಂಶಿಕೃಷ್ಣ ಅವರ ಜೊತೆ ಸಮಾಲೋಚಿಸಿದ್ದರು. ಮಕ್ಕಳು ಶಾಲೆಗೆ ತಡವಾಗಿ ಬಂದರೆ ಸುಮಾರು 50 ಬಸ್ಕಿ ಹೊಡೆಸುವುದು, ಆವರಣದಲ್ಲಿ 50 ರೌಂಡ್‌ ಓಡಿಸುವುದು ಕೆಟ್ಟ ಭಾಷೆ ಬಳಸಿರುವುದರ ಬಗ್ಗೆ ಹೇಳಿಕೆ ನೀಡಿದ್ದರು.

ಶಾಲೆಯ ಪ್ರಾಂಶುಪಾಲೆ ಮೀನಾಕ್ಷಿ ವಿನೋಧಿನಿ, ನರೇಶ್‌, ಭೌತಶಾಸ್ತ್ರ ಶಿಕ್ಷಕ ಭರತ್‌, ಗಣಿತ ಶಿಕ್ಷಕ ಶ್ರೀನಿವಾಸ್‌ ಮಕ್ಕಳಿಗೆ ಶಿಕ್ಷೆ ನೀಡಿದ್ದಾರೆ ಎನ್ನಲಾಗಿದೆ. ಶಿಕ್ಷಕರು ಕೆಟ್ಟ ಭಾಷೆ ಬಳಸಿರುವುದು 8ನೇ ತರಗತಿ ವಿದ್ಯಾರ್ಥಿ ಪುನೀತ್‌ ಗೌಡ ತಾಯಿ ಅರ್ಪಿತಾ ಅವರ ಸಹೋದರನ ಫೋನ್‌ನಲ್ಲಿ ವಿಡಿಯೊ ರೆಕಾರ್ಡ್‌ ಆಗಿದೆ. ಹೀಗಾಗಿ, ಆರೋಪಿತ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಏಳು ಸಂತ್ರಸ್ತ ವಿದ್ಯಾರ್ಥಿಗಳು ದೂರು ನೀಡಿದ್ದರು. ಇದರ ಆಧಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೂರು ನೀಡಿದ್ದರು. ಇದನ್ನು ಆಧರಿಸಿ ಯಲಹಂಕ ನ್ಯೂ ಟೌನ್‌ ಪೊಲೀಸರು ನಾಲ್ವರ ವಿರುದ್ಧ ಬಾಲ ನ್ಯಾಯ ಕಾಯಿದೆ ಸೆಕ್ಷನ್‌ 75, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 115(2), 352 ಜೊತೆಗೆ 3(5)ರ ಅಡಿ ಪ್ರಕರಣ ದಾಖಲಿಸಿದ್ದಾರೆ.