Karnataka High Court 
ಸುದ್ದಿಗಳು

ಇಂದಿರಾನಗರ ಆಟದ ಮೈದಾನದ ಅಭಿವೃದ್ಧಿ, ಉದ್ದೇಶಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಹೈಕೋರ್ಟ್‌ ತಡೆ

ಆಟದ ಮೈದಾನವನ್ನು ಒತ್ತುವರಿ ಮಾಡುವಂತಹ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಆಕ್ಷೇಪಿಸಿರುವ ಅರ್ಜಿದಾರರು ಪ್ರಸ್ತಾವನೆಯ ಮರುಪರಿಶೀಲನೆಗೆ ಕೋರಿದ್ದಾರೆ.

Bar & Bench

ಇಂದಿರಾನಗರ 1ನೇ ಹಂತದ ಆಟದ ಮೈದಾನದ ಅಭಿವೃದ್ಧಿ ಮತ್ತು ಉದ್ದೇಶಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಮಧ್ಯಂತರ ತಡೆ ನೀಡಿದೆ.

ಇಂದಿರಾ ನಗರ ಮೊದಲ ಹಂತದ ನಿವಾಸಿಗಳ ಸಂಘದ ಕಾರ್ಯದರ್ಶಿ ಸ್ವರ್ಣ ವೆಂಕಟರಾಮನ್‌ ಮತ್ತು ಜಂಟಿ ಕಾರ್ಯದರ್ಶಿ ಶಾನಿ ಸುನ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್‌ ಮತ್ತು ಟಿ ವೆಂಕಟೇಶ್‌ ನಾಯ್ಕ್‌ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಹಾಗೂ ಸಂಬಂಧಿಸಿದ ಎಂಜಿನಿಯರ್‌ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ಪೀಠವು ವಿಚಾರಣೆಯನ್ನ ಜೂನ್‌ 6ಕ್ಕೆ ಮುಂದೂಡಿದೆ.

“ಆಟದ ಮೈದಾನವನ್ನು ಒತ್ತುವರಿ ಮಾಡುವಂತಹ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಆಕ್ಷೇಪಿಸಿರುವ ಅರ್ಜಿದಾರರು ಪ್ರಸ್ತಾವನೆಯ ಮರುಪರಿಶೀಲನೆಗೆ ಕೋರಿರುವ ಕಾರಣ, ಈ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು” ಎಂದು ಪೀಠ ಮಧ್ಯಂತರ ಆದೇಶದಲ್ಲಿ ವಿವರಿಸಿದೆ.

“2024ರ ಆಗಸ್ಟ್‌ 14ರ ಟೆಂಡರ್‌ ಅಧಿಸೂಚನೆ ಅನುಸಾರ ಕಾಮಗಾರಿ ಕೈಗೊಂಡಿರುವ ಪ್ರತಿವಾದಿಗಳ ನಡೆಯನ್ನು ನಿರ್ಬಂಧಿಸಬೇಕು” ಎಂದು ಅರ್ಜಿದಾರರು ಕೋರಿದ್ದಾರೆ.