ಆನ್‌ಲೈನ್ ಮತ್ತು ಆಫ್‌ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಸಂಬಂಧಿಸಿದಂತೆ ಶಾಸಕ ವೀರೇಂದ್ರ ಪಪ್ಪಿ ಗೆಳೆಯ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಪುತ್ರ, ವಕೀಲ ಎಚ್ ಅನಿಲ್ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ ಜಾರಿ ಮಾಡಿರುವ ಸಮನ್ಸ್‌ಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆ ನೀಡಿದ್ದು, ಅನಿಲ್ ಗೌಡ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ನಿರ್ದೇಶಿಸಿದೆ.
ಜಾರಿ ನಿರ್ದೇಶನಾಲಯವು ತಮಗೆ ಸಮನ್ಸ್ ಜಾರಿ ಮಾಡಿದ್ದು, ತನಿಖೆ ತಡೆ ಮತ್ತು ಬಲವಂತದ ಕ್ರಮಕೈಗೊಳ್ಳದಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಅನಿಲ್ ಗೌಡ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದ್ದು, ಮಧ್ಯಂತರ ರಕ್ಷಣೆ ನೀಡಿದೆ.
“ವಕೀಲರಿಗೆ ಸಮನ್ಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಈ ನೆಲೆಯಲ್ಲಿ ಅನಿಲ್ ಗೌಡ ಅವರು ಮಧ್ಯಂತರ ರಕ್ಷಣೆಗೆ ಅರ್ಹರಾಗಿದ್ದು, 24.08.2025ರಂದು ಅನಿಲ್ ಗೌಡಗೆ ಜಾರಿ ನಿರ್ದೇಶನಾಲಯ ಜಾರಿ ಮಾಡಿರುವ ಸಮನ್ಸ್‌ಗೆ ತಡೆ ನೀಡಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ವಿಚಾರ ನಿರ್ಧಾರವಾಗುವವರೆಗೆ ಜಾರಿ ನಿರ್ದೇಶನಾಲಯವು ಅನಿಲ್ ಗೌಡ ವಿರುದ್ಧ ಪಿಎಂಎಲ್‌ಎ ಕಾಯಿದೆ ಸೆಕ್ಷನ್ 50 ಅನ್ವಯಿಸುವುದು ಮತ್ತು ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳುವುದರಿಂದ ಅಂತರ ಕಾಯ್ದುಕೊಳ್ಳಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅರ್ಜಿದಾರ ಪರ ಹಿರಿಯ ವಕೀಲ ವಿಕಾಸ್ ಪಹ್ವಾ ಅವರು “ಅನಿಲ್ ಗೌಡ ವೃತ್ತಿಯಲ್ಲಿ ಓರ್ವ ವಕೀಲ. ಕೆ ಸಿ ವೀರೇಂದ್ರ ಅವರಿಗೆ ಕಾನೂನು ಸಲಹೆಗಾರರಾಗಿದ್ದಾರೆ. ವಕೀಲನಾಗಿ ವೀರೇಂದ್ರ ಅವರಿಗೆ ಸಲಹೆ ನೀಡಿದ್ದಾರೆ. ವೀರೇಂದ್ರ ಅವರ ಕಂಪೆನಿಗಳಲ್ಲಿ ಹೂಡಿಕೆ ಮಾತ್ರ ಮಾಡಿದ್ದಾರೆ ಹೊರತು ಕಂಪೆನಿಯ ದೈನಂದಿನ ವ್ಯವಹಾರದಲ್ಲಿ ಭಾಗಿಯಾಗಿಲ್ಲ. ಇನ್ನು ಇ ಡಿ ಅಧಿಕಾರ ವ್ಯಾಪ್ತಿ ಮೀರಿ, ರಾಜಕೀಯಪ್ರೇರಿತ ಮತ್ತು ದುರುದ್ದೇಶದಿಂದ ಅನಿಲ್ ಗೌಡಗೆ ಸಮನ್ಸ್ ಜಾರಿ ಮಾಡಿ ದಾಖಲೆಗಳನ್ನು ಕೇಳಿದೆ. ಇ ಡಿ ಅಧಿಕಾರಿಯ ವ್ಯಾಪ್ತಿಯು ಸುಪ್ರೀಂ ಕೋರ್ಟ್ ಪರಿಶೀಲನೆಯಲ್ಲಿದೆ. ವೀರೇಂದ್ರ ಅವರಿಗೆ ವಕೀಲನಾಗಿ ಸಲಹೆ ನೀಡಿರುವುದರಿಂದ ಅವರನ್ನು ವಿಚಾರಣೆಗೊಳಪಡಿಸದಂತೆ ಇ ಡಿಗೆ ನಿರ್ದೇಶಿಸಬೇಕು” ಎಂಬ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
“ಕ್ಯಾಸಲ್ ರಾಕ್ ಸಂಸ್ಥೆಯಲ್ಲಿ ವೀರೇಂದ್ರ ಪಪ್ಪಿ ಅವರು ಶೇ. 35ರಷ್ಟು ಷೇರು, ಅನಿಲ್ ಗೌಡ ಶೇ. 15ರಷ್ಟು ಷೇರು ಹೊಂದಿದ್ದಾರೆ. ಅನಿಲ್ ಗೌಡರಿಂದ ಜಫ್ತಿ ಮಾಡಿರುವ ಲ್ಯಾಪ್‌ಟಾಪ್‌ನಲ್ಲಿ ಶೇ. 5ರಷ್ಟು ಲಾಭಾಂಶ ಅಂದರೆ 29 ಕೋಟಿ ರೂಪಾಯಿಯನ್ನು ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಅನಿಲ್ ಗೌಡ ಅವರು ವೀರೇಂದ್ರ ಜೊತೆ ಉದ್ಯಮ ನಡೆಸುತ್ತಿದ್ದರು ಎಂಬುದಕ್ಕೆ 28.07.2021ರ ಇಮೇಲ್ ಸಾಕ್ಷಿ ಒದಗಿಸುತ್ತದೆ. 28.07.2021ರಲ್ಲಿ ಅನಿಲ್ ಗೌಡ ಎಲ್‌ಎಲ್‌ಬಿ ಕಲಿಯುತ್ತಿರಬಹುದು. 2022ರಲ್ಲಿ ಅನಿಲ್ ಗೌಡ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದಾರೆ. ಇಂದು ಕಾನೂನಿನ ಪ್ರಕಾರ ಅನಿಲ್ ಗೌಡ ವಕೀಲರಾಗಿರಬಹುದು. ಆದರೆ, ಲೀಗಲ್ ಸರ್ವೀಸ್ ನೀಡಿರುವುದಕ್ಕಾಗಿ ಅನಿಲ್ ಗೌಡರಿಗೆ ಸಮನ್ಸ್ ನೀಡಲಾಗಿಲ್ಲ. ಉದ್ಯಮದಲ್ಲಿ ಪಾಲುದಾರರಾಗಿರುವುದರಿಂದ ಅವರ ಹೇಳಿಕೆ ದಾಖಲಿಸಲು ಸಮನ್ಸ್ ನೀಡಲಾಗಿದೆ” ಎಂದು ವಾದಿಸಿದ್ದ ಜಾರಿ ನಿರ್ದೇಶನಾಲಯದ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.
ಅನಿಲ್ ಗೌಡ ಪರವಾಗಿ ಹಿರಿಯ ವಕೀಲರಾದ ಎಚ್ ಎಸ್ ಚಂದ್ರಮೌಳಿ, ಕಿರಣ್ ಜವಳಿ, ವಕೀಲ ರಜತ್ ವಾದಿಸಿದ್ದರು. ವಕೀಲ ಶಾಶ್ವತ್ ಎಸ್. ಪ್ರಕಾಶ್ ಅವರು ವಕಾಲತ್ತು ಹಾಕಿದ್ದರು.