ಪ್ರತಿಷ್ಠಿತ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಂಜ್‌ಮೆಂಟ್‌ನಲ್ಲಿ (ಐಐಎಂ-ಬಿ) ಸಹ ಪ್ರಾಧ್ಯಾಪಕರೊಬ್ಬರು ತಮ್ಮ ವಿರುದ್ಧ ಸಹೋದ್ಯೋಗಿಗಳು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ನೀಡಿದ್ದ ದೂರಿನ ಅನ್ವಯ ದಾಖಲಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಷೇಧ) ತಿದ್ದುಪಡಿ ಸುಗ್ರೀವಾಜ್ಞೆ ಅಡಿ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ತಡೆಯಾಜ್ಞೆ ನೀಡಿದೆ.
ಐಐಎಂ-ಬಿ ಸಹ ಪ್ರಾಧ್ಯಾಪಕರಾಗಿರುವ ಡಾ. ಗೋಪಾಲ್ ದಾಸ್ ನೀಡಿರುವ ದೂರಿನ ಅನ್ವಯ ಬೆಂಗಳೂರಿನ ಮೈಕೊ ಲೇಔಟ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಐಐಎಂ-ಬಿ ನಿರ್ದೇಶಕ ರಿಷಿಕೇಶ ಟಿ. ಕೃಷ್ಣನ್ ಅಲಿಯಾಸ್ ರಿಷಿಕೇಶ ತಿರುವೆಂಟಕ ಕೃಷ್ಣನ್ ಸೇರಿ ಎಂಟು ಮಂದಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯವು ದೂರುದಾರ ಗೋಪಾಲ್ ದಾಸ್ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರ ಕೋರಿಕೆಯಂತೆ ಎಫ್‌ಐಆರ್‌ಗೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಗೋಪಾಲ್ ದಾಸ್ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಐಐಎಂ-ಬಿಯಲ್ಲಿ ಪದೋನ್ನತಿ ನಿರಾಕರಿಸಿದ ನಂತರ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ಗೋಪಾಲ್ ದಾಸ್ ದೂರು ನೀಡಿದ್ದಾರೆ. ಸಾರ್ವಜನಿಕವಾಗಿ ಗೋಪಾಲ್ ದಾಸ್ ಅವರನ್ನು ಜಾತಿ ಉಲ್ಲೇಖಿಸಿ ಅಮಾನಿಸಲಾಗಿದೆ ಎಂದು ಆರೋಪಿಸಲಾಗಿಲ್ಲ” ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಬನ್ನೇರುಘಟ್ಟ ಕ್ಯಾಂಪಸ್‌ನಲ್ಲಿರುವ ಐಐಎಂ-ಬಿಯ ನಿರ್ದೇಶಕ ರಿಷಿಕೇಶ ಟಿ ಕೃಷ್ಣನ್ ಅಲಿಯಾಸ್ ರಿಷಿಕೇಶ ತಿರುವೆಂಟಕ ಕೃಷ್ಣನ್, ಡೀನ್ ಫ್ಯಾಕಲ್ಟಿ ದಿನೇಶ್ ಕುಮಾರ್ ಅಲಿಯಾಸ್ ಉನ್ನಿಕೃಷ್ಣನ್ ದಿನೇಶ್ ಕುಮಾರ್, ಪ್ರಾಧ್ಯಾಪಕರಾದ ಶೈನೇಶ್ ಜಿ ಅಲಿಯಾಸ್ ಗಂಗಾಧರನ್ ಶೈನೇಶ್, ಶ್ರೀನಿವಾಸ್ ಪ್ರಾಖ್ಯ ಅಲಿಯಾಸ್ ಶೀನಿವಾಸ ಶಾಸ್ತ್ರಿ ಪ್ರಾಖ್ಯ, ಚೇತನ್ ಸುಬ್ರಮಣಿಯನ್, ಆಶಿಸ್ ಮಿಶ್ರಾ, ಶ್ರೀಲತಾ ಅಲಿಯಾಸ್ ಶ್ರೀಲತಾ ಜೊನ್ನಲಗೇಡಾ, ರಾಹುಲ್ ಡೇ ಅವರು ಉದ್ದೇಶಪೂರ್ವಕವಾಗಿ ತನ್ನ ಜಾತಿ ಬಹಿರಂಗಪಡಿಸಿ, ಪ್ರಚಾರ ಮಾಡಿದ್ದಾರೆ. ಕೆಲಸದ ಸ್ಥಳದಲ್ಲಿ ಸಮಾನ ಅವಕಾಶ ನೀಡದೇ ಜಾತಿ ಭೇದ, ವೈಷಮ್ಯ ಮಾಡಿ ಮಾನಸಿಕ ಕಿರುಕುಳ ನೀಡಿ, ಬೆದರಿಕೆ ಹಾಕಿದ್ದಾರೆ ಎಂದು ಡಿಸೆಂಬರ್ 12ರಂದು ಗೋಪಾಲ್ ದಾಸ್ ದೂರು ನೀಡಿದ್ದರು.
ಇದನ್ನು ಆಧರಿಸಿ ಮೈಕೊ ಲೇಔಟ್ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಷೇಧ) ತಿದ್ದುಪಡಿ ಸುಗ್ರೀವಾಜ್ಞೆ 2014 ಸೆಕ್ಷನ್‌ಗಳಾದ 3(1)(r), 3(1)(s) ಮತ್ತು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳಾದ 351(2), 351(3) ಅಡಿ ಪ್ರಕರಣ ದಾಖಲಿಸಿದ್ದಾರೆ.
ಗೋಪಾಲ್ ದಾಸ್ ಅವರ ವಿರುದ್ಧ ಐಐಎಂ-ಬಿಯ ಪಿಎಚ್.ಡಿ ವಿದ್ಯಾರ್ಥಿಗಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಪದೋನ್ನತಿ ತಡೆ ಹಿಡಿಯಲಾಗಿತ್ತು. ಈ ಕ್ರಮವನ್ನು ಆಕ್ಷೇಪಿಸಿ ಗೋಪಾಲ್ ದಾಸ್ ಜಾತಿ ನಿಂದನೆ ಆರೋಪ ಮಾಡಿ ರಾಷ್ಟ್ರಪತಿಗಳಿಗೆ ದೂರು ನೀಡಿದ್ದರು. ರಾಷ್ಟ್ರಪತಿ ಕಚೇರಿಯು ರಾಜ್ಯ ಸರ್ಕಾರಕ್ಕೆ ಕಾನೂನು ರೀತ್ಯಾ ಕ್ರಮಕ್ಕೆ ನಿರ್ದೇಶಿಸಿತ್ತು. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಡಿಸಿಆರ್‌ಇಗೆ ತನಿಖೆಗೆ ಆದೇಶಿಸಿತ್ತು. ತನಿಖೆಯ ಭಾಗವಾಗಿ ಅರ್ಜಿದಾರರಿಗೆ ಡಿಸಿಆರ್‌ಇ ನೀಡಿದ್ದ ನೋಟಿಸ್‌ಗೆ ಈಚೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.