T N Seetharam & Karnataka HC 
ಸುದ್ದಿಗಳು

ಜಮೀನಿಗೆ ಅತಿಕ್ರಮ ಪ್ರವೇಶ, ಮಹಿಳೆ ಗೌರವಕ್ಕೆ ಧಕ್ಕೆ: ನಿರ್ದೇಶಕ ಸೀತಾರಾಮ್‌ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಅರ್ಜಿದಾರರು ವಕೀಲರು ಮತ್ತು ಖ್ಯಾತ ಕಿರುತೆರೆ ನಿರ್ದೇಶಕರು. ಅವರಿಗೆ ಸಂಬಂಧಿಸಿದ ಆಸ್ತಿ ವಿಚಾರದಲ್ಲಿ ಈ ಸುಳ್ಳು ದೂರು ದಾಖಲಾಗಿದ್ದು ಇದಕ್ಕೆ ತಡೆ ನೀಡಬೇಕು ಎಂದು ಕೋರಿದ ಹಿರಿಯ ವಕೀಲ ದಿವಾಕರ್.‌

Bar & Bench

ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅತಿಕ್ರಮ ಪ್ರವೇಶ ಮಾಡಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಿರುತೆರೆ ನಿರ್ದೇಶಕ ಟಿ ಎನ್‌ ಸೀತಾರಾಮ್‌ ಮತ್ತು ಇತರರ ವಿರುದ್ಧ ದಾಖಲಿಸಲಾಗಿರುವ ಕ್ರಿಮಿನಲ್‌ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ಮಧ್ಯಂತರ ತಡೆ ನೀಡಿದೆ.

ಪ್ರಕರಣ ರದ್ದುಕೋರಿ ಟಿ ಎನ್‌ ಸೀತಾರಾಮ್‌ ಮತ್ತು ಅವರ ಸಹೋದರಿ ಕೆ ಎಸ್‌ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸೀತಾರಾಮ್‌ ಪರ ಹಿರಿಯ ವಕೀಲ ಕೆ ದಿವಾಕರ ಅವರು “ಅರ್ಜಿದಾರರು ವಕೀಲರು ಮತ್ತು ಖ್ಯಾತ ಕಿರುತೆರೆ ನಿರ್ದೇಶಕರು. ಅವರಿಗೆ ಸಂಬಂಧಿಸಿದ ಆಸ್ತಿ ವಿಚಾರದಲ್ಲಿ ಈ ಸುಳ್ಳು ದೂರು ದಾಖಲಾಗಿದ್ದು ಇದಕ್ಕೆ ತಡೆ ನೀಡಬೇಕು” ಎಂದು ಕೋರಿದರು.

ಇದಕ್ಕೆ ದೂರುದಾರ ಎಂ ಎ ಅರವಿಂದ ಕುಮಾರ್‌ ಪರ ಹಾಜರಾಗಿದ್ದ ವಕೀಲ ಜೆ ಆರ್ ಜಗದೀಶ್ ಆಕ್ಷೇಪ ವ್ಯಕ್ತಪಡಿಸಿದರಾದರೂ, ಪೀಠ ಸೀತಾರಾಮ್‌ ಮತ್ತು ಇತರರ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಿ ಆದೇಶಿಸಿತು.

ದೊಡ್ಡಬಳ್ಳಾಪುರ ತಾಲ್ಲೂಕಿನ ಹಸನಘಟ್ಟ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿನ ಒಟ್ಟು ಐದು ಎಕರೆಗೂ ಹೆಚ್ಚು ವಿಸ್ತೀರ್ಣದ ಜಮೀನಿನಲ್ಲಿ ಒಂದಷ್ಟು ಭಾಗ ತಮ್ಮ ಹೆಸರಿಗೆ ಇದೆ ಎಂಬ ಟಿ.ಎನ್‌ ಸೀತಾರಾಮ್‌ ಅವರ ದಾವೆಗೆ ಸಂಬಂಧಿಸಿದಂತೆ ಎಂ ಎ ಅರವಿಂದ ಕುಮಾರ್ ಮತ್ತು ಸೀತಾರಾಮ್‌ ನಡುವೆ ತಕರಾರು ನಡೆದಿದೆ. ಈ ಸಂಬಂಧ ಎಂ ಎ ಅರವಿಂದ ಕುಮಾರ್ ಅವರು, ಟಿ ಎನ್‌ ಸೀತಾರಾಮ್‌, ಕೆ ಎಸ್ ವಿಜಯಲಕ್ಷ್ಮಿ, ರಾಕೇಶ್ ಮತ್ತು ಶಶಾಂಕ ವಿರುದ್ಧ  ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ನಾಲ್ವರೂ ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತ ತನಿಖೆ ರದ್ದುಪಡಿಸಬೇಕು ಎಂದು ಕೋರಿ ಸೀತಾರಾಮ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.