ಬೈಲಾ (ಉಪ ನಿಯಮ) ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿರುದ್ಧದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ.
ಮಹಾಸಭಾದ ಆಡಳಿತ ಮಂಡಳಿಯು ಬೈಲಾ ಉಲ್ಲಂಘಿಸಿದೆ ಎಂದು ಆರೋಪಿಸಿ ಮಹಾಸಭಾದ ಸದಸ್ಯ ಕೆ ಮೋಹನ್ ಎಂಬುವರ ದೂರು ಆಧರಿಸಿ ವಿಚಾರಣೆಗೆ ಆದೇಶಿಸಿರುವ ಮತ್ತು ತನಿಖೆಯನ್ನು ಅಧಿಕಾರ ವ್ಯಾಪ್ತಿ ಮೀರಿ ಸಹಕಾರ ಸಂಘಗಳ ಉಪ ನಿಬಂಧಕರು (ವಲಯ-3) ಇವರಿಂದ ಸಹಕಾರ ಸಂಘಗಳ ಉಪ ನಿಬಂಧಕರು (ವಲಯ-4) ಇವರಿಗೆ ವರ್ಗಾಯಿಸಿರುವ ಸಹಕಾರ ಸಂಘಗಳ ಜಂಟಿ ನಿಬಂಧಕರು ಬೆಂಗಳೂರು ಪ್ರಾಂತ್ಯ ಇವರ ಆದೇಶವನ್ನು ಪ್ರಶ್ನಿಸಿ ಅಖಿಲ ಕರ್ನಾಟಕ ಮಹಾಸಭಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಮಹಾಸಭಾ ವಿರುದ್ಧದ ವಿಚಾರಣೆಗೆ ಮಧ್ಯಂತರ ತಡೆ ನೀಡಿತು. ಅಲ್ಲದೆ ಅರ್ಜಿ ಸಂಬಂಧ ಸಹಕಾರ ಇಲಾಖೆ, ಸಹಕಾರ ಸಂಘಗಳ ಜಂಟಿ ನಿಬಂಧಕರು ಬೆಂಗಳೂರು ಪ್ರಾಂತ, ಉಪ ನಿಬಂಧಕರು-ವಲಯ 3 ಮತ್ತು ಉಪ ನಿಬಂಧಕರು ವಲಯ-4 ಇವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿತು. ಮಹಾಸಭಾದ ಪರ ಹಿರಿಯ ವಕೀಲ ಶ್ರೀರಂಗ ವಾದ ಮಂಡಿಸಿದರು.
ಮಹಾಸಭಾದ ಆಡಳಿತ ಮಂಡಳಿಗೆ ಬೈಲಾ ಪ್ರಕಾರ 2026ರ ಏಪ್ರಿಲ್ 13ಕ್ಕೆ ಚುನಾವಣೆ ನಡೆದಿದೆ. ಬೈಲಾ ಉಲ್ಲಂಘನೆ ಆಗಿದೆ ಎಂದು ಕೆ ಮೋಹನ್ ತನಿಖೆಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು. ಈ ಸಂಬಂಧ ಉಪನಿಬಂಧಕರು ವಲಯ-3 ಮಹಾಸಭಾಗೆ ನೋಟಿಸ್ ಕೊಟ್ಟಿದ್ದರು. ಅದಕ್ಕೆ ಮಹಾಸಭಾದಿಂದ 2025ರ ಡಿಸೆಂಬರ್ 17ರಂದು ವಿವರವಾದ ಉತ್ತರ ಕೊಡಲಾಗಿತ್ತು. ಈ ಮಧ್ಯೆ ಮೋಹನ್ ಅವರ ಮನವಿ ಆಧರಿಸಿ ಸಹಕಾರ ಸಂಘಗಳ ಕಾಯಿದೆಯ ಸೆಕ್ಷನ್ 25ರಡಿ ಉಪ ನಿಬಂಧಕರು ವಲಯ -4 ಇವರನ್ನು ತನಿಖಾಧಿಕಾರಿಯನ್ನಾಗಿ ಜಂಟಿ ನಿಬಂಧಕರು ನೇಮಿಸಿದ್ದರು. ಅದರಂತೆ ಉಪ ನಿಬಂಧಕರು ವಲಯ-4 ಮಹಾಸಭಾಗೆ ನೋಟಿಸ್ ಜಾರಿಗೊಳಿಸಿ ಫೆಬ್ರವರಿ 25ರೊಳಗೆ ಉತ್ತರಿಸುವಂತೆ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಮಹಾಸಭಾ ಹೈಕೋರ್ಟ್ ಮೆಟ್ಟಿಲೇರಿದೆ.
ಜಂಟಿ ನಿಬಂಧಕರು ಹಾಗೂ ಉಪ ನಿಬಂಧಕರ ಕ್ರಮ ಕಾನೂನುಬಾಹಿರ ಮತ್ತು ಏಕಪಕ್ಷೀಯವಾಗಿದೆ. ಅಧಿಕಾರ ವ್ಯಾಪ್ತಿ ಇಲ್ಲದೆ, ಸಹಜ ನ್ಯಾಯ ತತ್ವವನ್ನು ಉಲ್ಲಂಘಿಸಿ ಜಂಟಿ ನಿಬಂಧಕರು 2026ರ ಫೆ.9ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ವಿಚಾರಣಾ ಪ್ರಕ್ರಿಯೆ ಕಾನೂನು ಬಾಹಿರ ಎಂದು ಘೋಷಿಸಬೇಕು. ಅರ್ಜಿಯ ಅಂತಿಮ ಇತ್ಯರ್ಥದವರೆಗೆ ಮಹಾಸಭಾದ ವಿರುದ್ಧದ ವಿಚಾರಣೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.