ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ನಿವೇಶನ ಹಂಚಿಕೆ ಹಗರಣ ಆರೋಪ ಮಾಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧದ ವಂಚನೆ ಪ್ರಕರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆ ನೀಡಿದೆ.
ತನ್ನಿಂದ 2018, 2019 ಹಾಗೂ 2020ರಲ್ಲಿ ಪ್ರತಿ ವರ್ಷ ತಲಾ ರೂ.1 ಲಕ್ಷದಂತೆ ಮೂರು ಲಕ್ಷ ರೂಪಾಯಿ ಸಾಲ ಪಡೆದು ಅದನ್ನು ಮರುಪಾವತಿಸದೆ ಸ್ನೇಹಮಯಿ ಕೃಷ್ಣ ವಂಚಿಸಿದ್ದಾರೆ ಎಂದು ಚಾಮರಾಜನಗರ ಕರುಣಾಕರ ದಾಖಲಿಸಿರುವ ಪ್ರಕರಣದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ಅರ್ಜಿ ಆಲಿಸಿದ ಪೀಠವು ಮುಂದಿನ ವಿಚಾರಣೆವರೆಗೆ ಚಾಮರಾಜನಗರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ತಡೆ ನೀಡಿತು. ಅಲ್ಲದೇ, ದೂರುದಾರ ಕರುಣಾಕರ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.