ಬುದ್ಧಿಮಾಂದ್ಯ ಯುವಕನೊಬ್ಬನ ಕಿಡ್ನಿ ಮಾರಾಟ, ನಿಗೂಢ ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಸಬ್ ಇನ್ಸ್‌ಪೆಕ್ಟರ್ ಹಾಗೂ ಹೆಡ್ ಕಾನ್ಸ್‌ಟೆಬಲ್ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಹಾಗೂ ದಂಡ ವಸೂಲಿ ಮಾಡಲು ಶಿಫಾರಸ್ಸು ಮಾಡಿ ರಾಜ್ಯ ಮಾನವ ಹಕ್ಕುಗಳ ಆಯೋಗ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಮಾನವ ಹಕ್ಕು ಆಯೋಗ 2022ರ ಡಿಸೆಂಬರ್ 5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಪ್ರಕರಣ ನಡೆದಾಗ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಆಗಿರುವ ವಿ ಸಂತೋಷ್ ಹಾಗೂ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೆಬಲ್ ಆಗಿರುವ ಕೆ ಎಸ್ ಗೋಪಾಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ಪೀಠವು “ಇದೇ ಪ್ರಕರಣದಲ್ಲಿ ಇತರೆ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧದ ಪ್ರಕರಣಕ್ಕೆ ಮತ್ತೊಂದು ಪೀಠ ತಡೆ ನೀಡಿದೆ. ಆದ್ದರಿಂದ ಈ ಪ್ರಕರಣದಲ್ಲೂ ಮಧ್ಯಂತರ ತಡೆ ನೀಡಲಾಗುತ್ತದೆ” ಎಂದು ಹೇಳಿತು. ಅಲ್ಲದೆ ರಾಜ್ಯ ಸರ್ಕಾರ, ಮಾನವ ಹಕ್ಕು ಆಯೋಗ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ದೂರುದಾರ ಶಿವಾನಂದ ಬಿ. ಬಾವೂರು ಇವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿತು.
ಯಾದಗಿರಿ ಜಿಲ್ಲೆ ಮೂಲದ 29 ವರ್ಷದ ಬುದ್ದಿಮಾಂದ್ಯ ಯುವಕ ಶಂಕರಪ್ಪನ ಕಿಡ್ನಿ ಮಾರಾಟ ಸಂಬಂಧ 2020ರಲ್ಲಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ಆರು ತಿಂಗಳ ವಿಳಂಬ, ಸೂಕ್ತ ತನಿಖೆ ನಡೆಸದೆ ಕರ್ತವ್ಯ ಲೋಪ ಎಸಗಿರುವುದು ಆಯೋಗದ ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ವಿ ಸಂತೋಷ್, ಕೆ ಎಸ್ ಗೋಪಾಲ್ ಸೇರಿ ಐವರು ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಮತ್ತು ಸಬ್ ಇನ್ಸ್‌ಪೆಕ್ಟರ್ ಅವರಿಂದ 1.50 ಲಕ್ಷ ರೂಪಾಯಿ ಮತ್ತು ಹೆಡ್‌ಕಾನ್ಸ್‌ಟೆಬಲ್ ನಿಂದ ಒಂದು ಲಕ್ಷ ರೂಪಾಯಿ ದಂಡ ವಸೂಲಿ ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆಯೋಗ ಶಿಫಾರಸ್ಸು ಮಾಡಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.