Karnataka HC and KPSC 
ಸುದ್ದಿಗಳು

[ಪುತ್ರಿ ಅಕ್ರಮ ನೇಮಕಕ್ಕೆ ಸಹಕಾರ] ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಹುದ್ದೆ ತ್ಯಜಿಸುವ ನಿರ್ಣಯಕ್ಕೆ ಹೈಕೋರ್ಟ್‌ ತಡೆ

ನಿರ್ಣಯ ಅಂಗೀಕರಿಸಿದ ಸಂಬಂಧ ವರದಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯಪಾಲರ ಕಚೇರಿಗೆ ಕ್ರಮವಾಗಿ ಜುಲೈ 6 ಮತ್ತು 7ರಂದು ಕಳಿಸಿಕೊಟ್ಟ ಆಯೋಗದ ಕಾರ್ಯದರ್ಶಿಯವರ ಪತ್ರಗಳಿಗೆ ನ್ಯಾಯಾಲಯ ತಡೆ ನೀಡಿದೆ.

Bar & Bench

ಪುತ್ರಿಯ ಅಕ್ರಮ ನೇಮಕಾತಿಗೆ ಸಹಕರಿಸುವ ಮೂಲಕ ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಸಾಹುಕಾರ್ ತಕ್ಷಣ ರಾಜೀನಾಮೆ ಕೊಟ್ಟು, ಹುದ್ದೆ ತ್ಯಜಿಸಬೇಕು ಎಂದು ಆಯೋಗದ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.

ಈ ವಿಚಾರವಾಗಿ 2026ರ ಜೂನ್ 19ರಂದು ಆಯೋಗದ ಸಭೆಯಲ್ಲಿ ಕೈಗೊಂಡ ನಿರ್ಣಯ ಪ್ರಶ್ನಿಸಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Suraj Govindraj

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಆಯೋಗದ ಹಿರಿಯ ಸದಸ್ಯ ಡಾ. ಬಿ ಪ್ರಭುದೇವ ಅವರ ಅಧ್ಯಕ್ಷತೆಯಲ್ಲಿ ಜೂನ್ 19ರಂದು ನಡೆದ ಸಭೆಯಲ್ಲಿ ‘ಶಿವಶಂಕರಪ್ಪ ಸಾಹುಕಾರ್ ತಕ್ಷಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹುದ್ದೆ ತ್ಯಜಿಸಬೇಕು ಎಂದು ಕೈಗೊಂಡ ನಿರ್ಣಯ ಹಾಗೂ ಆ ನಿರ್ಣಯ ಅಂಗೀಕರಿಸಿದ ಸಂಬಂಧ ವರದಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯಪಾಲರ ಕಚೇರಿಗೆ ಕ್ರಮವಾಗಿ ಜುಲೈ 6 ಮತ್ತು 7ರಂದು ಕಳಿಸಿಕೊಟ್ಟ ಆಯೋಗದ ಕಾರ್ಯದರ್ಶಿಯವರ ಪತ್ರಗಳಿಗೆ ತಡೆ ನೀಡಿತು.

ಅಲ್ಲದೇ ಅರ್ಜಿ ಸಂಬಂಧ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದ ಸದಸ್ಯರಾದ ಡಾ. ಬಿ. ಪ್ರಭುದೇವ, ಡಾ. ಶಾಂತಾ ಹೊಸಮನಿ, ಡಾ. ಎಚ್ ಎಸ್ ನರೇಂದ್ರ, ಬಿ ವಿ ಗೀತಾ, ಶಕುಂತಲಾ ಎಸ್ ದುಂಡಿಗೌಡರ್, ಡಾ. ಆರ್ ಕಾವಲ್ಲಮ್ಮ, ಎಂ ವಿ ರಾಮಕೃಷ್ಣ ಪ್ರಸಾದ್, ಶಿವನಗೌಡ, ಪ್ರೊ. ವಿ ದೇವಪ್ಪ, ಡಾ. ಹೆಚ್ ಎಸ್ ಭೋಜ್ಯನಾಯ್ಕ್ ಹಾಗೂ ಆಯೋಗದ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 11ಕ್ಕೆ ಮುಂದೂಡಿತು. ಅರ್ಜಿದಾರ ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ವಾದ ಮಂಡಿಸಿದರು. ವಕೀಲ ಆರ್. ದಿಲೀಪ್ ಕುಮಾರ್ ಗೌಡ ವಕಾಲತ್ತು ವಹಿಸಿದ್ದರು.

ವಿಚಾರಣೆ ವೇಳೆ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಕೆಪಿಎಸ್‌ ಅಧ್ಯಕ್ಷರ ವಿರುದ್ಧ ಆರೋಪಗಳು ಕೇಳಿ ಬಂದಾಗ ಸಂವಿಧಾನದ 317ನೇ ವಿಧಿ ಪ್ರಕಾರವೇ ಕ್ರಮ ಆಗಬೇಕು. ಅಧ್ಯಕ್ಷರ ರಾಜೀನಾಮೆ ಕೇಳುವ ಅಥವಾ ಹಂಗಾಮಿ ಅಧ್ಯಕ್ಷರನ್ನು ನಿಯೋಜಿಸಿಕೊಂಡು ಸಭೆ ನಡೆಸುವ ಅಧಿಕಾರ ಕೆಪಿಎಸ್‌ಸಿ ಸದಸ್ಯರಿಗೆ ಇರುವುದಿಲ್ಲ. ಆಯೋಗದ ಸದಸ್ಯರು ಅಂಗೀಕರಿಸಿರುವ ನಿರ್ಣಯ ಹಾಗೂ ಅದರ ನಂತರದ ಬೆಳವಣಿಗೆಗೆಗಳು ಕರ್ನಾಟ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಕಾರ್ಯಗಳು) ಕಾಯಿದೆ-1959ರ ಸೆಕ್ಷನ್ 5,7 ಮತ್ತು 11ಕ್ಕೆ ವಿರುದ್ಧವಾಗಿದೆ. ಆದ್ದರಿಂದ ಸಭೆಯ ನಿರ್ಣಯ, ಕಾರ್ಯದರ್ಶಿಗಳ ಪತ್ರಗಳನ್ನು ರದ್ದುಪಡಿಸಬೇಕು. ಅಲ್ಲದೇ ಅರ್ಜಿ ಇತ್ಯರ್ಥ ಆಗುವ ತನಕ ನಿರ್ಣಯಕ್ಕೆ ತಡೆ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ಪೀಠ ತಡೆ ನೀಡಿ ಆದೇಶಿಸಿತು.