Senapathy Kris Gopalakrishnan & Karnataka HC 
ಸುದ್ದಿಗಳು

ಜಾತಿ ನಿಂದನೆ ಪ್ರಕರಣ: ಕ್ರಿಸ್‌ ಗೋಪಾಲಕೃಷ್ಣನ್‌ ಸೇರಿ 16 ಮಂದಿ ವಿರುದ್ದದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

“ಅರ್ಜಿದಾರರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಹಾಗೂ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ಖಾಸಗಿ ದೂರಿನ ವಿಚಾರಣಾ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ಆದೇಶಿಸಿದ ಹೈಕೋರ್ಟ್.

Bar & Bench

ಪ್ರತಿಷ್ಠಿತ ಇನ್ಫೋಸಿಸ್‌ ಸಹ ಸಂಸ್ಥಾಪಕ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆಡಳಿತ ಮಂಡಳಿ ಅಧ್ಯಕ್ಷ ಸೇನಾಪತಿ ಕ್ರಿಸ್‌ ಗೋಪಾಲಕೃಷ್ಣನ್‌, ಐಐಎಸ್‌ಸಿ ನಿರ್ದೇಶಕ ಪ್ರೊ. ಗೋವಿಂದನ್‌ ರಂಗರಾಜನ್‌ ಸೇರಿ 16 ಮಂದಿಯ ವಿರುದ್ಧ ಜಾತಿ ನಿಂದನೆ ಪ್ರಕರಣ ಮತ್ತು ವಿಶೇಷ ನ್ಯಾಯಾಲಯದಲ್ಲಿನ ಖಾಸಗಿ ದೂರಿನ ವಿಚಾರಣಾ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ತಡೆಯಾಜ್ಞೆ ವಿಧಿಸಿದೆ.

ವಿಶೇಷ ನ್ಯಾಯಾಲಯವು ಡಾ. ಡಿ ಸಣ್ಣ ದುರ್ಗಪ್ಪ ಅವರ ಖಾಸಗಿ ದೂರಿನ ಸಂಜ್ಞೇ ಪರಿಗಣಿಸಿರುವುದು ಮತ್ತು ಬೆಂಗಳೂರಿನ ಸದಾಶಿವನಗರ ಠಾಣೆಯ ಪೊಲೀಸರು ಜನವರಿ 27ರಂದು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸೇನಾಪತಿ ಕ್ರಿಸ್‌ ಗೋಪಾಲಕೃಷ್ಣನ್‌, ಐಐಎಸ್‌ಸಿ ನಿರ್ದೇಶಕ ಗೋವಿಂದನ್‌ ರಂಗರಾಜನ್‌ ಸೇರಿ 16 ಮಂದಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

Justice S R Krishna Kumar

“ಅರ್ಜಿದಾರರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಹಾಗೂ 71ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಲ್ಲಿ ದಾಖಲಾಗಿರುವ ಖಾಸಗಿ ದೂರಿನ ವಿಚಾರಣಾ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ. ಅಲ್ಲದೇ, ಆದೇಶದಲ್ಲಿ ಮಾರ್ಪಾಡು ಕೋರುವ ಸ್ವಾತಂತ್ರ್ಯವನ್ನು ಪ್ರತಿವಾದಿಗಳಿಗೆ ಕಾಯ್ದಿರಿಸಲಾಗಿದೆ ಎಂದೂ ಆದೇಶಿಸಿಲಾಗಿದೆ.

ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಲಾಗಿದ್ದು, ಐಐಸಿಎಸ್‌ಯ ಸುಸ್ಥಿರ ತಂತ್ರಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಭೋವಿ ಸಮುದಾಯದ ಡಾ. ಡಿ ಸಣ್ಣ ದುರ್ಗಪ್ಪ ಅವರಿಗೆ ಹೈಕೋರ್ಟ್‌ ತುರ್ತು ನೋಟಿಸ್‌ ಜಾರಿ ಮಾಡಿದೆ. ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಲಾಗಿದೆ.

ಐಐಎಸ್‌ಸಿ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್‌, ರಿಜಿಸ್ಟ್ರಾರ್‌ ಕ್ಯಾಪ್ಟನ್‌ ಶ್ರೀಧರ್‌ ವಾರಿಯರ್‌, ಆಡಳಿತ ಮಂಡಳಿ ಮುಖ್ಯಸ್ಥ ಸೇನಾಪತಿ ಕ್ರಿಸ್‌ ಗೋಪಾಲಕೃಷ್ಣನ್‌, ಆಡಳಿತ ಮತ್ತು ಹಣಕಾಸು ವಿಭಾಗದ ಡೀನ್‌, ಎಂಸಿಬಿ ವಿಭಾಗದ ಪ್ರೊ. ದೀಪ್ಶಿಕಾ ಚಕ್ರವರ್ತಿ, ಮೆಕಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊ. ನಮ್ರತಾ ಗುಂಡಯ್ಯ, ವೈದ್ಯಕೀಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿರ್ಮಲಾ, ಬಯೋ ಎಂಜಿನಿಯರಿಂಗ್‌ ವಿಭಾಗದ ಪ್ರೊ. ಸಂಧ್ಯಾ ಎಸ್‌. ವಿಶ್ವೇಶ್ವರಯ್ಯ (ನಿವೃತ್ತ), ಇಸಿಇ ವಿಭಾಗದ ಪ್ರೊ. ಕೆವಿಎಸ್‌ ಹರಿ, ಸಿಎಸ್‌ಟಿ ವಿಭಾಗದ ಪ್ರೊ. ಎಸ್‌ ದಾಸಪ್ಪ, ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ವಿಭಾಗದ ಪ್ರಧಾನ ಸಂಶೋಧನ ವಿಜ್ಞಾನಿ ಡಾ. ಪಿ ಬಾಲಚಂದ್ರ, ಐಐಎಸ್‌ಸಿ ಮಾಜಿ ನಿರ್ದೇಶಕ ಪಿ ಬಲರಾಮ್‌, ಬಯೊಕೆಮಿಸ್ಟ್ರಿ ವಿಭಾಗದ ಪ್ರೊ.ಅಂಜಲಿ ಎ. ಕಾರಂಡೆ (ನಿವೃತ್ತ), ಪ್ರೊ. ಇ ಚಟ್ಟೋಪಾಧ್ಯಾಯ (ನಿವೃತ್ತ), ವಕೀಲರಾದ ಪ್ರದೀಪ್‌ ಎಸ್‌. ಸಾವ್ಕಾರ್‌ ಮತ್ತು ಅಭಿಲಾಷ್‌ ರಾಜು ಅರ್ಜಿ ಸಲ್ಲಿಕೆ ಮಾಡಿದ್ದರು.

ಹೇಮಲತಾ ಮ್ಹಿಷಿ ಮತ್ತು ವಿಕ್ಟರ್‌ ಮನೋಹರನ್‌ ಅವರನ್ನೂ ಒಳಗೊಂಡಂತೆ 18 ಮಂದಿಯ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್‌ 3(8), 3(14), 3(1)(2), 3(x) ಅಡಿ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.