PM Modi and Karnataka HC 
ಸುದ್ದಿಗಳು

ಪ್ರಧಾನಿ ಅವಮಾನಿಸುವ ಪೋಸ್ಟ್‌ನ ಮರು ಹಂಚಿಕೆ ಆರೋಪ: ಯುವಕನ ವಿರುದ್ಧದ ದೇಶದ್ರೋಹ ಪ್ರಕರಣಕ್ಕೆ ಹೈಕೋರ್ಟ್‌ ತಡೆ

“ಯಾವುದೇ ಘಟನೆಯನ್ನು ಉಲ್ಲೇಖಿಸದೇ ಅಥವಾ ಭಾರತದ ಹೆಸರು ಹೇಳದೇ ಪಾಕಿಸ್ತಾನವನ್ನು ಬೆಂಬಲಿಸುವುದು ಮೇಲ್ನೋಟಕ್ಕೆ ಬಿಎನ್‌ಎಸ್‌ ಸೆಕ್ಷನ್‌ 152 ಅಡಿ ಅಪರಾಧವಾಗುವುದಿಲ್ಲ” ಎಂದಿರುವ ಹೈಕೋರ್ಟ್‌.

Bar & Bench

ಭಾರತ-ಪಾಕಿಸ್ತಾನದ ಗಡಿಯಲ್ಲಿ ಈಚೆಗೆ ಉದ್ವಿಗ್ನ ಸ್ಥಿತಿ ಇದ್ದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಬೂಟು ತೊಡಿಸುವ ವಿಡಿಯೋವನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮರು ಹಂಚಿಕೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಿರುವ ದೇಶದ್ರೋಹ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ತಡೆ ನೀಡಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲಿನ ಜಾವೀದ್‌ ಪಾಷಾ ಅವರು ಪೋಸ್ಟ್‌ ಅನ್ನು ಮರು ಹಂಚಿಕೊಳ್ಳುವಾಗ ದೇಶಕ್ಕೆ ಅಗೌರವ ತರುವ ಯಾವುದೇ ರೀತಿಯ ಅಂಶಗಳನ್ನು ಉಲ್ಲೇಖಿಸಿಲ್ಲ ಎಂದು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಹೇಳಿದೆ.

Justice S R Krishna Kumar

“ಪರ-ವಿರೋಧ ವಾದ ಆಲಿಸಿ, ದೂರು ಮತ್ತು ಎಫ್‌ಐಆರ್‌ ಅನ್ನು ಪರಿಶೀಲಿಸಿದ ಬಳಿಕ ಅರ್ಜಿದಾರ ಜಾವೀದ್‌ ಪಾಷಾ ಮರು ಹಂಚಿಕೊಂಡಿರುವ ಪೋಸ್ಟ್‌ ಜೊತೆಗೆ ಯಾವುದೇ ರೀತಿಯಲ್ಲೂ ದೇಶಕ್ಕೆ ಅಗೌರವ ತರುವ ಅಂಶಗಳನ್ನು ಅವರು ಉಲ್ಲೇಖಿಸಿಲ್ಲ. ಯಾವುದೇ ಘಟನೆಯನ್ನು ಉಲ್ಲೇಖಿಸದೇ ಅಥವಾ ಭಾರತದ ಹೆಸರು ಹೇಳದೇ ಪಾಕಿಸ್ತಾನವನ್ನು ಬೆಂಬಲಿಸುವುದು ಮೇಲ್ನೋಟಕ್ಕೆ ಬಿಎನ್‌ಎಸ್‌ ಸೆಕ್ಷನ್‌ 152 ಅಡಿ ಅಪರಾಧವಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ದೂರು ಮತ್ತು ಎಫ್‌ಐಆರ್‌ ಅನ್ನು ಪರಿಶೀಲಿಸಿದ ಬಳಿಕ ಮೇಲ್ನೋಟಕ್ಕೆ ತಿಳಿಯುವುದೇನೆಂದರೆ ಬಿಎನ್‌ಎಸ್‌ ಸೆಕ್ಷನ್‌ 152 ಅನ್ವಯಿಸುವ ಪ್ರಕರಣ ಇದಾಗಿಲ್ಲ. ಅಂತಹ ಯಾವುದೇ ಅಂಶ ಎಫ್‌ಐಆರ್‌ ಮತ್ತು ದೂರಿನಲ್ಲಿಲ್ಲ. ಅರ್ಜಿದಾರ ಪಾಷಾ ಅವರು ಪೋಸ್ಟ್‌ನ ಮೂಲದಾತರಲ್ಲ ಎಂಬುದು ನಿರ್ವಿವಾದ, ತನ್ನ ಫೇಸ್‌ಬುಕ್‌ ಸ್ನೇಹಿತರಿಂದ ಪಡೆದಿರುವ ಪೋಸ್ಟ್‌ ಅನ್ನು ಅವರು ಮರು ಹಂಚಿಕೆ ಮಾಡಿದ್ದಾರೆ ಅಷ್ಟೆ. ಹೀಗಾಗಿ, ಬಿಎನ್‌ಎಸ್‌ ಸೆಕ್ಷನ್‌ 152 ಅನ್ವಯಿಸುತ್ತದೆಯೇ ಎಂಬುದನ್ನು ಈ ನ್ಯಾಯಾಲಯವು ಪರಿಗಣಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

ಈ ನೆಲೆಯಲ್ಲಿ ಜಾವೀದ್‌ ಪಾಷಾ ವಿರುದ್ಧದ ಬಿಎನ್‌ಎಸ್‌ ಸೆಕ್ಷನ್‌ 152 (ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಧಕ್ಕೆ) ಅಡಿ ಪ್ರಕರಣಕ್ಕೆ ಮಾತ್ರ ತಡೆ ನೀಡಲಾಗಿದೆ ಎಂದು ನ್ಯಾಯಾಲಯವು ಆದೇಶಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ಅರ್ಜಿದಾರನು ಆಟೊ ಮೆಕಾನಿಕ್‌ ಆಗಿದ್ದು, ಅವನಿಗೆ ಅದರ ಜ್ಞಾನವೇ ಇಲ್ಲ. ಅವರ ಆಟೊ ಗ್ಯಾರೇಜ್‌ ಸುಡಲಾಗಿದೆ. ಎಫ್‌ಐಆರ್‌ ಮತ್ತು ದೂರನ್ನು ಪರಿಶೀಲಿಸಿದರೆ ದೇಶದ್ರೋಹದ ಆರೋಪ ಅನ್ವಯಿಸುವ ಪ್ರಕರಣ ಇದಲ್ಲ ಎಂದು ವಿನೋದ್‌ ದುವಾ ವರ್ಸಸ್‌ ಭಾರತ ಸರ್ಕಾರ ಹಾಗೂ ಇಮ್ರಾನ್‌ ಪ್ರತಾಪ್‌ಗಢಿ ವರ್ಸಸ್‌ ಗುಜರಾತ್‌ ಸರ್ಕಾರ ಪ್ರಕರಣಗಳಲ್ಲಿನ ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲೇಖಿಸಿ, ಪ್ರಕರಣಕ್ಕೆ ತಡೆ ನೀಡಬೇಕು” ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರು “ಜಾವೀದ್‌ ಪಾಷಾ ಕೃತ್ಯದಿಂದ ದೊಂಬಿ ನಡೆದಿದ್ದು, ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ, ಅಂಗಡಿ ಸುಟ್ಟು ಹಾಕಿದ್ದಾರೆ. ದಾಖಲೆಗಳನ್ನು ಸಲ್ಲಿಸಲು ಪ್ರಯತ್ನಿಸಿದ್ದೇನೆ. ಈತನ ಕೃತ್ಯದಿಂದ ಜನರು ಪೊಲೀಸ್‌ ಠಾಣೆಯ ಮುಂದೆ ನೆರೆದಿದ್ದರು. ಹೀಗಾಗಿ, ಪ್ರಕರಣಕ್ಕೆ ತಡೆ ನೀಡಬಾರದು” ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ಕಿರುಗಾವಲು ಪೊಲೀಸ್‌ ಠಾಣೆಯ ಪೇದೆ ಮಹೇಶ್‌ ನೀಡಿದ್ದ ದೂರಿನ ಅನುಸಾರ, 2025ರ ಮೇ 8ರಂದು ಕಿರುಗಾವಲು ಗ್ರಾಮದ ಜಾವೀದ್‌ ಪಾಷಾ ಎಂಬವರು ತಮ್ಮ ಜಾವೀದ್‌ ಜಾವೀದ್‌ ಫೇಸ್‌ಬುಕ್‌ ಖಾತೆಯಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಇರುವಾಗ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾವಚಿತ್ರವನ್ನು ಹಂಚಿಕೆ ಮಾಡಿ, ದೊಂಬಿಗೆ ಕಾರಣವಾಗುವ ಪ್ರಚೋದನಕಾರಿ ವಿಡಿಯೋ ಹಂಚಿಕೊಂಡಿರುವ ಮಾಹಿತಿ ಬಂದಿತ್ತು ಎಂದು ವಿವರಿಸಲಾಗಿತ್ತು.

ಮುಂದುವರೆದು,ಬಾತ್ಮಿದಾರನ ಮೊಬೈಲ್‌ನಲ್ಲಿ ಜಾವೀದ್‌ ಪಾಷಾ ಅವರ ಫೇಸ್‌ಬುಕ್‌ ಖಾತೆ ಪರಿಶೀಲಿಸಲಾಗಿ ಅದರಲ್ಲಿ ಪ್ರಧಾನಿ ಮೋದಿಯುವರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಬೂಟು ತೊಡಿಸುವ ವಿಡಿಯೊವನ್ನು ಸೃಷ್ಟಿ ಮಾಡಿ ಪೋಸ್ಟ್‌ ಮಾಡಿರುವುದು ಕಂಡುಬಂದಿತ್ತು ಎಂದು ಮಹೇಶ್‌ ದೂರು ನೀಡಿದ್ದರು. ಇದನ್ನು ಆಧರಿಸಿ ಕಿರುಗಾವಲು ಪೊಲೀಸರು ಪಾಷಾ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 152, 340 (ವಿದ್ಯುನ್ಮಾನ ದಾಖಲೆಗಳನ್ನು ತಿರುಚುವುದು) ಮತ್ತು 192 ಅಡಿ ಪ್ರಕರಣ ದಾಖಲಿಸಿದ್ದಾರೆ.