HD Kumaraswamy Karnataka HC 
ಸುದ್ದಿಗಳು

ಎಚ್‌ಡಿಕೆ ವಿರುದ್ಧದ ಭೂ ಒತ್ತುವರಿ ಪ್ರಕರಣ: ಮಧ್ಯಂತರ ಆದೇಶಕ್ಕೆ ಹೈಕೋರ್ಟ್‌ ತಡೆ; ಎಸ್‌ಐಟಿ ತನಿಖೆ ಹಾದಿ ಸುಗಮ

ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿದ್ದ ಏಕಸದಸ್ಯ ಪೀಠದ ಮಧ್ಯಂತರ ಆದೇಶದ ವಿರುದ್ದ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

Bar & Bench

ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರು ಆರೋಪಿಯಾಗಿರುವ ಬಿಡದಿ ಸಮೀಪದ ಕೇತಗಾನಹಳ್ಳಿ ಬಳಿಯ ಸರ್ಕಾರಿ ಜಮೀನು ಒತ್ತುವರಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದ ಸರ್ಕಾರದ ಆದೇಶಕ್ಕೆ ತಡೆ ನೀಡಿದ್ದ ಏಕಸದಸ್ಯ ಪೀಠದ ಮಧ್ಯಂತರ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಸೋಮವಾರ ತಡೆಯಾಜ್ಞೆ ನೀಡಿದೆ. ಆ ಮೂಲಕ ಎಸ್‌ಐಟಿ ತನಿಖೆಗೆ ಎದುರಾಗಿದ್ದ ಅಡ್ಡಿ ನಿವಾರಣೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಎಎಸ್‌ ಅಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದ ಸರಕಾರದ ಆದೇಶಕ್ಕೆ ತಡೆ ನೀಡಿರುವ ಏಕಸದಸ್ಯಪೀಠದ ಮಧ್ಯಂತರ ಆದೇಶದ ವಿರುದ್ದ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾ. ಸಿ ಎಂ ಜೋಷಿ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

ಕೆಲ ಕಾಲ ವಾದ ಆಲಿಸಿದ ವಿಭಾಗೀಯಪೀಠವು ಈ ಮಧ್ಯಂತರ ಆದೇಶವನ್ನು ನೀಡಿ ಎಚ್‌ಡಿಕೆ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ಮೇಲ್ಮನವಿ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ‘‘ಈ ಪ್ರಕರಣದಲ್ಲಿ ಪ್ರತಿವಾದಿಗಳ ವಿರುದ್ಧ 6 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಲಾಗಿದೆ ಎಂಬ ಆರೋಪವಿದೆ. ಆ ಒತ್ತುವರಿ ತೆರವಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಈ ಕುರಿತ ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ದಾಖಲೆಗಳನ್ನು ಹಾಜರುಪಡಿಸುವಂತೆ ಎಸ್‌ಐಟಿ ಆರೋಪಿಗಳಿಗೆ ನೋಟಿಸ್‌ ಜಾರಿಗೊಳಿಸಿದೆ. ಆದರೆ ಎಸ್‌ಐಟಿ ರಚನೆಗೆ ಏಕಸದಸ್ಯ ಪೀಠ ತಡೆ ನೀಡಿದೆ. ಹಾಗಾಗಿ ತಡೆಯಾಜ್ಞೆ ತೆರವುಗೊಳಿಸಬೇಕು’’ ಎಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ನ್ಯಾಯಾಲಯ ಏಕಸದಸ್ಯಪೀಠ ನೀಡಿದ್ದ ಮಧ್ಯಂತರ ಆದೇಶಕ್ಕೆ ನ.26ರವರೆಗೆ ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತು ಅವರ ಸಂಬಂಧಿ ಡಿ ಸಿ ತಮ್ಮಣ್ಣ ಮತ್ತಿತರರು ಕೇತಗಾನಹಳ್ಳಿಯಲ್ಲಿ14 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆಂಬ ಆರೋಪವಿದೆ. ಈ ಸಂಬಂಧ ಲೋಕಾಯುಕ್ತ ನೀಡಿದ್ದ ವರದಿ ಜಾರಿಗೊಳಿಸಲು ಹೈಕೋರ್ಟ್‌ ಆದೇಶ ನೀಡಿದ್ದರೂ ಅದನ್ನು ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್‌ ಆರ್‌ ಹಿರೇಮಠ್‌ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಇದನ್ನು ಪರಿಶೀಲಿಸಿದ್ದ ಹೈಕೋರ್ಟ್‌ ವಿಭಾಗೀಯ ಪೀಠ, ಭೂಮಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿತ್ತು. ಆನಂತರ ಜಮೀನಿನ ಸರ್ವೆ ಕಾರ್ಯ ನಡೆಸಿದ ಸ್ಥಳೀಯ ತಹಸೀಲ್ದಾರ್‌, ಕುಮಾರಸ್ವಾಮಿ ಹಾಗೂ ಮತ್ತಿತರರಿಗೆ ನೋಟಿಸ್‌ ಜಾರಿಗೊಳಿಸಿದ್ದರು. ಅದನ್ನು ಪ್ರಶ್ನಿಸಿ ಅವರು ಕೋರ್ಟ್‌ ಮೆಟ್ಟಿಲೇರಿದ್ದರು.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲು ಸರಕಾರ ಹಿರಿಯ ಐಎಎಸ್‌ ಅಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಅದನ್ನು ಪ್ರಶ್ನಿಸಿ ಎಚ್‌ಡಿಕೆ ಮತ್ತಿತರರು ಏಕಸದಸ್ಯಪೀಠದ ಮುಂದೆ ಅರ್ಜಿ ಸಲ್ಲಿಸಿದ್ದಾಗ, ನ್ಯಾಯಾಲಯ ಎಸ್‌ಐಟಿ ರಚನೆ ಆದೇಶಕ್ಕೆ ತಡೆ ನೀಡಿತ್ತು.