ಸುದ್ದಿಗಳು

ಕಾಲ್ತುಳಿತ ಪ್ರಕರಣ: ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ಪಡೆಯುವ ಸಿಐಡಿ ಯತ್ನಕ್ಕೆ ತಣ್ಣೀರೆರಚಿದ ಹೈಕೋರ್ಟ್‌

ಒಂಬತ್ತು ದಿನ ಕಸ್ಟಡಿಗೆ ನೀಡುವಂತೆ ಕೋರಿ ಸಿಐಡಿಯು ಒಂದನೇ ಎಸಿಎಂಎಂಗೆ ಅರ್ಜಿ ಸಲ್ಲಿಸಿದೆ. ಹೈಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿದ್ದರಿಂದ ಕಸ್ಟಡಿ ಅರ್ಜಿ ವಿಚಾರಣೆ ಕೋರುವುದಿಲ್ಲ ಎಂದು ಸರ್ಕಾರ ಹೇಳಿದೆ.  

Bar & Bench

ಕಾಲ್ತುಳಿತ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಆರೋಪಿಗಳನ್ನು ತನಿಖೆಗಾಗಿ ವಶಕ್ಕೆ ಪಡೆಯುವ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಂಗಳವಾರ ತಿಳಿಸಿರುವುದರಿಂದ ಎಲ್ಲಾ ಆರೋಪಿಗಳನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಹೈಕೋರ್ಟ್‌ನಲ್ಲಿ ಮಧ್ಯಾಹ್ನ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಪೀಠದ ಮುಂದೆ ವಿಚಾರಣೆ ಮುಗಿಯುತ್ತಿದ್ದ ಬೆನ್ನಿಗೇ ಸಿಐಡಿ ಪೊಲೀಸರು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್‌ ಸೋಸಲೆ, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ನಿರ್ದೇಶಕ ಸುನೀಲ್‌ ಮ್ಯಾಥ್ಯೂ, ವ್ಯವಸ್ಥಾಪಕ ಎಸ್‌ ಕಿರಣ್‌ ಕುಮಾರ್‌ ಮತ್ತು ಸಮಂತ್‌ ಮಾವಿನಕೆರೆ ಅವರನ್ನು ಬೆಂಗಳೂರಿನ ಒಂದನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲು ಕರೆತಂದಿದ್ದರು.

ಇದನ್ನು ಅರಿತ ಆರೋಪಿಗಳ ಪರ ವಕೀಲರು ಹೈಕೋರ್ಟ್‌ನಲ್ಲಿ ಈ ವಿಚಾರ ಉಲ್ಲೇಖಿಸಲಾಗಿದ್ದು, ಸಂಜೆ ನಾಲ್ಕು ಗಂಟೆಗೆ ಹೈಕೋರ್ಟ್‌ ಅರ್ಜಿ ವಿಚಾರಣೆ ನಡೆಸಲಿರುವುದರಿಂದ ಕಸ್ಟಡಿ ಅರ್ಜಿಯನ್ನು ವಿಚಾರಣೆ ನಡೆಸದಂತೆ ಕೋರಲಾಗಿತ್ತು. ಇದಕ್ಕೆ ಮ್ಯಾಜಿಸ್ಟ್ರೇಟ್‌ ಒಪ್ಪಿ, ಮುಂದೂಡಿದ್ದರು.

ಈ ಮಧ್ಯೆ, ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಪೀಠಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು ಕಸ್ಟಡಿ ಮಾಹಿತಿ ನೀಡಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಸಿಐಡಿ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಾಲಯವು “ಎಲ್ಲಾ ಆರೋಪಿಗಳ ಅರ್ಜಿಗಳು ಹೈಕೋರ್ಟ್‌ನಲ್ಲಿ ಬಾಕಿ ಇರುವಾಗ ಸಿಐಡಿ ಅವರನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿರುವುದು ಸರಿಯಲ್ಲ” ಎಂದಿತು.

ಆಗ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಆರೋಪಿಗಳನ್ನು ಕಸ್ಟಡಿಗೆ ಪಡೆಯುವ ಸಂಬಂಧ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಮುಂದು ಮಾಡುವುದಿಲ್ಲ” ಎಂದರು.

ಹೀಗಾಗಿ, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕರೆತರಲಾಗಿದ್ದ ನಾಲ್ವರು ಆರೋಪಿಗಳನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಿ, ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಇದಕ್ಕೂ ಮುನ್ನ ಸಿಐಡಿಯು ಒಂಭತ್ತು ದಿನ ಆರೋಪಿಗಳನ್ನು ತನ್ನ ವಶಕ್ಕೆ ತನಿಖೆಗೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿತ್ತು.