Justice Suraj Govindraj 
ಸುದ್ದಿಗಳು

ಮಾನಸಿಕ ಆರೋಗ್ಯ, ತಾರತಮ್ಯ ವಿರೋಧಿ ನೀತಿ ರೂಪಿಸಲು ಕಾಲೇಜು, ವಿಶ್ವವಿದ್ಯಾಲಯಗಳಿಗೆ ಹೈಕೋರ್ಟ್‌ ನಿರ್ದೇಶನ

ಕ್ಯಾಂಪಸ್‌ನಲ್ಲಿ ಮಾನಸಿಕ ಆರೋಗ್ಯ ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ ರೂಪಿಸುವುದು ಮತ್ತು ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ ಅಡಿ ತೃತೀಯ ಲಿಂಗಿಗಳಿಗೆ ಕ್ಯಾಂಪಸ್‌ ನೀತಿ ರೂಪಿಸಲು ನಿರ್ದೇಶನ ಕೋರಲಾಗಿತ್ತು.

Bar & Bench

ವಿದ್ಯಾರ್ಥಿಗಳ ಮೇಲೆ ಉಂಟು ಮಾಡಬಹುದಾದ ಹಾನಿಕಾರಕ ಪರಿಣಾಮಗಳನ್ನು ಪರಿಹರಿಸುವುದಕ್ಕಾಗಿ ಮಾನಸಿಕ ಆರೋಗ್ಯ ನೀತಿ ಮತ್ತು ತಾರತಮ್ಯ ವಿರೋಧಿ ನೀತಿ ರೂಪಿಸುವಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಸಲಹೆ ನೀಡಿದೆ.

ಕ್ಯಾಂಪಸ್‌ನಲ್ಲಿ ಮಾನಸಿಕ ಆರೋಗ್ಯ ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ ರೂಪಿಸುವುದು ಮತ್ತು ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ ಅಡಿ ತೃತೀಯ ಲಿಂಗಿಗಳಿಗೆ ಕ್ಯಾಂಪಸ್‌ ನೀತಿ ರೂಪಿಸಲು ನಿರ್ದೇಶನ ಕೋರಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ದುರದೃಷ್ಟಕರ ವಿಚಾರವೆಂದರೆ ಇಂಥ ಒಂದು ನೀತಿಯನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಸಂಬಂಧಿತ ವಿಶ್ವವಿದ್ಯಾಲಯ ಅಥವಾ ವಿಶ್ವವಿದ್ಯಾಲಯ ಅನುದಾನ ಆಯೋಗ ಸೇರಿದಂತೆ ಯಾವುದೇ ಪ್ರಾಧಿಕಾರ ರೂಪಿಸಿಲ್ಲ. ಆದರೆ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಇಂಥ ನೀತಿ ರೂಪಿಸಿ ಜಾರಿಗೊಳಿಸುವುದಕ್ಕೆ ಕ್ರಮ ತೆಗೆದುಕೊಂಡಿದೆ ಎಂದು ಪೀಠ ಮೆಚ್ಚುಗೆ ಸೂಚಿಸಿದೆ.

ಹಲವು ಸಂದರ್ಭದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಸಾಮಾಜಿಕವಾಗಿ ಅಸಹಜ ವರ್ತನೆಗೆ ಕಾರಣವಾಗುವ ಆ ಮೂಲಕ ವಿದ್ಯಾರ್ಥಿಗಳ ಪೋಷಕರು, ಕುಟುಂಬ, ಶಿಕ್ಷಕರು ಸೇರಿ ಸಮುದಾಯ ಒಳಗೊಂಡಂತೆ ಎಲ್ಲರ ಮೇಲೂ ಗಂಭೀರ ಪರಿಣಾಮ ಬೀರುವಂಥ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ನೀತಿಯನ್ನು ರಾಜ್ಯದ ಎಲ್ಲಾ ಸರ್ಕಾರಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಪಾಲಿಸಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಜೀಂ ಪ್ರೇಮ್‌ಜಿ ರೂಪಿಸಿರುವ ನೀತಿಯನ್ನು ಸಂಬಂಧಿತ ಪ್ರಾಧಿಕಾರಗಳು ಪರಿಗಣಿಸಿ, ಅದರಲ್ಲಿಯೂ ವಿಶೇಷ ಚೇತನ ಮಕ್ಕಳ ಆಸಕ್ತಿ ಮತ್ತು ಮಾನಸಿಕ ಆರೋಗ್ಯ ಇತ್ಯಾದಿ ಸೇರ್ಪಡೆ ಮಾಡುವ ಮೂಲಕ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ, ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಇಂಥ ನೀತಿ ಹೊಂದುವುದನ್ನು ಕಡ್ಡಾಯಗೊಳಿಸಬೇಕು. ಒಂದೊಮ್ಮೆ ನಿರ್ದಿಷ್ಟ ಕಾಲೇಜು ಅಥವಾ ವಿಶ್ವವಿದ್ಯಾಲಯ ಅಂಥ ನೀತಿಯನ್ನು ರೂಪಿಸಿರದಿದ್ದರೆ ಸಂಬಂಧಿತ ಸಂಸ್ಥೆ/ಪ್ರಾಧಿಕಾರ ರೂಪಿಸಿರುವುದನ್ನು ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ರಾಷ್ಟ್ರೀಯ ತೃತೀಯ ಲಿಂಗಿಗಳ ಒಕ್ಕೂಟ ಮತ್ತು ಕೇಂದ್ರದ ಸಮಾಜ ಕಲ್ಯಾಣ ಇಲಾಖೆಗೆ ಅತ್ಯಂತ ಮುಖ್ಯವಾದ ಈ ವಿಚಾರಗಳಿಗೆ ಪರಿಹಾರ ಕಂಡು ಹಿಡಿಯಲು ಅಗತ್ಯ ನೀತಿ ರೂಪಿಸಿ ಜಾರಿಗೊಳಿಸುವಂತೆ ಆದೇಶಿಸಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ರೂಪಿಸಿ, ಜಾರಿಗೊಳಿಸಿರುವ ನೀತಿಯು ಎಲ್ಲಾ ವಿದ್ಯಾರ್ಥಿಗಳಿಗೆ ಅದರಲ್ಲೂ ತಮ್ಮನ್ನು ತೃತೀಯ ಲಿಂಗಿಗಳು ಎಂದು ಘೋಷಿಸಿಕೊಂಡಿರುವವರು ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೂ ಅನ್ವಯಿಸಲಿದೆ ಎಂದು ನ್ಯಾಯಾಲಯ ಆದೇಶಿಸಿದೆ.

xxx Vs Azim Premji University.pdf
Preview