IPS officer M Chandrashekar , H D Kumaraswamy & Karnataka HC 
ಸುದ್ದಿಗಳು

[ಚಂದ್ರಶೇಖರ್‌ಗೆ ಎಚ್‌ಡಿಕೆ ಬೆದರಿಕೆ ಪ್ರಕರಣ] ಸಂಧಾನಕ್ಕೆ ಮಧ್ಯಸ್ಥಿಕೆದಾರ, ದಿನಾಂಕ, ಸ್ಥಳ ಸೂಚನೆ: ಹೈಕೋರ್ಟ್‌

ಎಚ್ ಡಿ ‌ಕುಮಾರ ಸ್ವಾಮಿ ಅವರು‌ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ  ಎಂದು ಆರೋಪಿಸಿ ಚಂದ್ರಶೇಖರ್‌, ಸಂಜಯನಗರ ಪೊಲೀಸ್‌ ಠಾಣೆಯಲ್ಲಿ 2024ರಲ್ಲಿ ದೂರು ದಾಖಲಿಸಿದ್ದರು.

Bar & Bench

ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ ಚಂದ್ರಶೇಖರ್‌ಗೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇತ್ಯರ್ಥಪಡಿಸಲು ಸೂಕ್ತ ಮಧ್ಯಸ್ಥಿಕೆದಾರರನ್ನು ನೇಮಕ‌ ಮಾಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ತಿಳಿಸಿದೆ.

ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಆರೋಪದ ಪ್ರಕರಣದಲ್ಲಿ ತಮ್ಮ ವಿರುದ್ಧ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಅರ್ ರದ್ದುಪಡಿಸಬೇಕು ಎಂದು ಕೋರಿ ಕುಮಾರ ಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಮತ್ತು ಸುರೇಶ್‌ ಬಾಬು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕುಮಾರಸ್ವಾಮಿ ಪರ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ನ್ಯಾಯಾಲಯವು ಮಧ್ಯಸ್ಥಿಕೆದಾರರನ್ನು ನೇಮಕ ಮಾಡಬಹುದು” ಎಂದರು.

ಇದನ್ನು ಆಲಿಸಿದ ಪೀಠವು ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಮಾಡಲು ಮಧ್ಯಸ್ಥಿಕೆದಾರರನ್ನು ನೇಮಕ‌ ಮಾಡಲು ಕುಮಾರಸ್ವಾಮಿ ಹಾಗೂ ಚಂದ್ರಶೇಖರ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ನ್ಯಾಯಾಲಯವೇ ಸೂಕ್ತ ಮಧ್ಯಸ್ಥಿಕೆದಾರರ ನೇಮಕ ಮಾಡಲಿದೆ. ಜೊತೆಗೆ, ಮಧ್ಯಸ್ಥಿಕೆದಾರರನ್ನು ಮುಂದೆ ಅರ್ಜಿದಾರರು ಹಾಗೂ ದೂರುದಾರರು ಮಾತುಕತೆ ನಡೆಸಲು ಹಾಜರಾಗಬೇಕಾದ ದಿನಾಂಕ ಮತ್ತು ಸ್ಥಳವನ್ನುನಿಗದಿಪಡಿಸಲಾಗುವುದು ಎಂದು ತಿಳಿಸಿ ಏಪ್ರಿಲ್‌ 30ಕ್ಕೆ ವಿಚಾರಣೆ ಮುಂದೂಡಿತು.

ಎಚ್ ಡಿ ‌ಕುಮಾರ ಸ್ವಾಮಿ ಅವರು‌ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ  ಎಂದು ಆರೋಪಿಸಿ ಚಂದ್ರಶೇಖರ್‌, ಸಂಜಯನಗರ ಪೊಲೀಸ್‌ ಠಾಣೆಯಲ್ಲಿ 2024ರಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 224 (ಸರ್ಕಾರಿ ನೌಕರರಿಗೆ ಅವರ ಅಧಿಕೃತ ಕರ್ತವ್ಯಗಳ ಮೇಲೆ ಪ್ರಭಾವ ಬೀರಲು ಬೆದರಿಕೆ ಹಾಕಿದ) ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದೆ.