Karnataka HC and Justices K Somashekar and Umesh M Adiga
Karnataka HC and Justices K Somashekar and Umesh M Adiga 
ಸುದ್ದಿಗಳು

ಮತದಾನ ದಿನದ ಹಿಂದಿನ 48 ಗಂಟೆ ಅವಧಿಯಲ್ಲಿ ಮದ್ಯ‌ ಮಾರಾಟ ನಿರ್ಬಂಧ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

Bar & Bench

ವಿಧಾನ ಪರಿಷತ್‌ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ದಿನಕ್ಕೂ ಹಿಂದಿನ 48 ಗಂಟೆ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದ ಜಿಲ್ಲಾಧಿಕಾರಿ ಕ್ರಮವನ್ನು ಗುರುವಾರ ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್ ಮದ್ಯ ನಿಷೇಧವನ್ನು ಕೇವಲ ಮತ ಎಣಿಕೆ ಹಾಗೂ ಮತದಾನ ದಿನಕ್ಕೆ ಸೀಮಿತಗೊಳಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ವಿಧಿಸಿದೆ.

ಮದ್ಯ ಮಾರಾಟ ನಿಷೇಧವನ್ನು ಒಂದು ದಿನಕ್ಕೆ ಸೀಮಿತಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ಪ್ರಜಾ ಪ್ರತಿನಿಧಿ ಕಾಯಿದೆ ಸೆಕ್ಷನ್ 135 (ಸಿ) ಪ್ರಕಾರ ಯಾವುದೇ ಚುನಾವಣೆ ಘೋಷಣೆ ಆದರೂ, ಚುನಾವಣೆಗೂ ಮುನ್ನ 48 ಗಂಟೆಗಳ ಕಾಲ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಬೇಕು ಎಂದು ತಿಳಿಸಲಾಗಿದೆ. ಅದರ ಪ್ರಕಾರ ಸರ್ಕಾರ ವಿಧಾನ ಪರಿಷತ್ ಉಪಚುನಾವಣೆಗೆ ಮತದಾನದ ದಿನಕ್ಕೂ ಮುನ್ನ 48 ಗಂಟೆಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಅಲ್ಲದೇ, ಏಕಸದಸ್ಯ ಪೀಠ ಮದ್ಯ ಮಾರಾಟವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿರುವ ಆದೇಶ ಕಾನೂನಿಗೆ ವಿರುದ್ದವಾಗಿದೆ. ಮದ್ಯ ಮಾರಾಟ ಮಾಡುವುದು ಮೂಲಭೂತ ಹಕ್ಕಲ್ಲ. ಆದ್ದರಿಂದ, ಈ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.‌

ಈ ಅಂಶ ದಾಖಲಿಸಿಕೊಂಡ ಪೀಠವು ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ ಜಿಲ್ಲಾಧಿಕಾರಿಗಳ ಆದೇಶ ಎತ್ತಿಹಿಡಿದಿದೆ. ಅಲ್ಲದೇ, ಮತದಾನಕ್ಕೂ ಮುನ್ನ 48 ಗಂಟೆಗಳು ಹಾಗೂ ಮತ ಎಣಿಕೆ ದಿನದಲ್ಲಿ ಆಹಾರ ಪೂರೈಸಲು ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಫೆ.14ರಂದು ಸಂಜೆ 5ರಿಂದ ಮತದಾನ ನಡೆಯುವ ಫೆ.16ರ ಮಧ್ಯರಾತ್ರಿ 12ರವರೆಗೆ ಮತ್ತು ಮತ ಎಣಿಕೆ ದಿನವಾದ ಫೆ.20ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ನಗರದ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಚುನಾವಣೆ ಮುಕ್ತಾಯಕ್ಕೆ ಹಿಂದಿನ 48 ಗಂಟೆ ಅವಧಿಯಲ್ಲಿ ಮದ್ಯ‌ ಮಾರಾಟ ನಿರ್ಬಂಧಿಸಬಹುದು ಎಂಬ ಸರ್ಕಾರದ ವಾದವನ್ನು ತಿರಸ್ಕರಿಸಿತು. ಮತದಾನದ ದಿನವಾದ ಫೆ.16 ಮತ್ತು ಮತ ಎಣಿಕೆ ದಿನವಾದ ಫೆ.20ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಮಾತ್ರ ನಗರದಲ್ಲಿ ಮದ್ಯ ಮಾರಾಟ‌ಕ್ಕೆ ನಿರ್ಬಂಧಿಸಿ ವಿಧಿಸಿ ಮಧ್ಯಂತರ ಆದೇಶ ಮಾಡಿತ್ತು. ಆ ಮೂಲಕ ನಗರ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಆಯುಕ್ತರ ಆದೇಶವನ್ನು ಮಾರ್ಪಡಿಸಿತು. ಇದನ್ನು ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.