Karntaka HC and Justice N S Sanjay Gowda 
ಸುದ್ದಿಗಳು

ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಆರ್‌ಟಿಐ ವ್ಯಾಪ್ತಿಗೆ ಒಳಪಡಲಿದೆ ಎಂಬ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಸರ್ಕಾರಿ ಜಮೀನು ಗುತ್ತಿಗೆ ಪಡೆದ ಮತ್ತು ಸಬ್ಸಿಡಿ ದರದಲ್ಲಿ ಬಾಡಿಗೆ ಪಾವತಿ ಮಾಡುತ್ತಿರುವ ಕಾರಣ ಕೆಜಿಎ ಸಾರ್ವಜನಿಕ ಪ್ರಾಧಿಕಾರವಾಗಲಿದೆ. ಆದ್ದರಿಂದ, ಕೆಜಿಎ ಸಹ ಆರ್‌ಟಿಐ ಕಾಯಿದೆ ವ್ಯಾಪ್ತಿಗೆ ಬರಲಿದೆ ಎಂದಿರುವ ನ್ಯಾಯಾಲಯ.

Bar & Bench

ಬೆಂಗಳೂರಿನಲ್ಲಿರುವ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (ಕೆಜಿಎ) ಅನ್ನು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆ-2005ರ ಅಡಿ ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿ ಕರ್ನಾಟಕ ಮಾಹಿತಿ ಆಯೋಗ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿಹಿಡಿದಿದೆ.

ಆಯೋಗದ ಆದೇಶ ಪ್ರಶ್ನಿಸಿ ಕೆಜಿಎ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯ ಗೌಡ ಅವರ ನೇತೃತ್ವದ ಏಸಕದಸ್ಯ ಪೀಠವು ವಜಾಗೊಳಿಸಿದೆ.

ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್, ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಮತ್ತು ಲೇಡಿಸ್ ಕ್ಲಬ್‌ಗಳು ಸಹ ಸರ್ಕಾರಿ ಭೂಮಿಯನ್ನು ರಿಯಾಯಿತಿ ದರದಲ್ಲಿ ಗುತ್ತಿಗೆ ಪಡೆದಿವೆ. ಇದರಿಂದ ಈ ನಾಲ್ಕು ಸಂಸ್ಥೆಗಳು ಸಾರ್ವಜನಿಕ ಪ್ರಾಧಿಕಾರಗಳಾಗಿದ್ದು, ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಒಳಪಡಲಿದೆ ಎಂದು 2021ರ ಜನವರಿ 13ರಂದು ಆದೇಶಿಸಿದೆ. ಈ ಪ್ರಕರಣದಲ್ಲಿರುವ ಅರ್ಜಿದಾರ ಸಂಘ ಸಹ, ತನ್ನನ್ನು ಆರ್‌ಟಿಐ ಕಾಯಿದೆ ವ್ಯಾಪ್ತಿಗೆ ಸೇರಿಸಿ ಮಾಹಿತಿ ಆಯೋಗವು 2014ರ ಅಕ್ಟೋಬರ್‌ 14ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿದೆ ಎಂದು ಆದೇಶದಲ್ಲಿ ಪೀಠ ಹೇಳಿದೆ.

ಅಲ್ಲದೆ, ಮೈಸೂರು ಟಫ್ ಕ್ಲಬ್ ಹಾಗೂ ಇತರೆ ಕ್ಲಬ್‌ಗಳ ಪ್ರಕರಣದಲ್ಲಿ ಹೇಳಿರುವಂತೆ ಕೆಜಿಎ ಸಹ 124 ಎಕರೆ ಸರ್ಕಾರಿ ಜಮೀನನ್ನು 2010ರಿಂದ 30 ವರ್ಷ ಕಾಲ ಗುತ್ತಿಗೆ ಪಡೆದಿದೆ. ಹಾಗೆಯೇ, ತನ್ನ ವಾರ್ಷಿಕ ನಿವ್ವಳ ಆದಾಯದಲ್ಲಿ ಅತ್ಯಂತ ಕಡಿಮೆ ಪ್ರಮಾಣ ಅಂದರೆ ಕೇವಲ ಶೇ 2 ಪ್ರಮಾಣವನ್ನು (ಸಬ್ಸಿಡಿ ದರ) ಬಾಡಿಗೆ ಪಾವತಿಸುತ್ತಿದೆ. ಸರ್ಕಾರಿ ಜಮೀನು ಗುತ್ತಿಗೆ ಪಡೆದ ಮತ್ತು ಸಬ್ಸಿಡಿ ದರದಲ್ಲಿ ಬಾಡಿಗೆ ಪಾವತಿ ಮಾಡುತ್ತಿರುವ ಕಾರಣ ಕೆಜಿಎ ಸಾರ್ವಜನಿಕ ಪ್ರಾಧಿಕಾರವಾಗಲಿದೆ. ಆದ್ದರಿಂದ, ಕೆಜಿಎ ಸಹ ಆರ್‌ಟಿಐ ಕಾಯಿದೆ ವ್ಯಾಪ್ತಿಗೆ ಬರಲಿದ್ದು, ಈ ಕುರಿತು ಕರ್ನಾಟಕ ಮಾಹಿತಿ ಆಯೋಗದ ಆದೇಶ ಸೂಕ್ತವಾಗಿದೆ ಎಂದು ಆದೇಶದಲ್ಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.

ವಕೀಲ ಎಸ್ ಉಮಾಪತಿ ಅವರು ಮಾಹಿತಿ ಹಕ್ಕು ಕಾಯಿದೆ ಅಡಿ ಕೆಲವೊಂದು ಮಾಹಿತಿ ಕೋರಿ ಕೆಜಿಎಗೆ 2012ರ ಆಗಸ್ಟ್‌ 30ರಂದು ಅರ್ಜಿ ಸಲ್ಲಿಸಿದ್ದರು. ಆದರೆ, ತಾನು ಮಾಹಿತಿ ಹಕ್ಕು ಕಾಯಿದೆಗೆ ಒಳಪಡುವುದಿಲ್ಲ ಎಂದಿದ್ದ ಕೆಜಿಎ, ಮಾಹಿತಿ ನೀಡಲು ನಿರಾಕರಿಸಿತ್ತು. ಇದರಿಂದ ಉಮಾಪತಿ ಅವರು ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಆಯೋಗ, ಕೆಜಿಎ ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿ 2014ರ ಅಕ್ಟೋಬರ್‌ 14ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಕೆಜಿಎ, ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.

Karnataka Golf Association Vs Karnataka Information Commission.pdf
Preview