Justice Suraj Govindaraj and Karnataka HC, Kalburgi bench 
ಸುದ್ದಿಗಳು

ಶಾಲಾ, ಕಾಲೇಜುಗಳಿಗೆ ಆಹಾರ ಧಾನ್ಯ ಪೂರೈಕೆ ಟೆಂಡರ್‌ ವ್ಯವಸ್ಥೆ ಬದಲು: ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ಅರ್ಜಿದಾರರ ಪೈಕಿ ಕೆಲವರು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನರ್ಹರಾಗುತ್ತಾರೆ ಎಂಬ ಕಾರಣಕ್ಕಾಗಿ ನೂತನ ಟೆಂಡರ್‌ ಪ್ರಕ್ರಿಯೆಯು ಸ್ವೇಚ್ಛೆ ಮತ್ತು ಅತಾರ್ಕಿಕವಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

ರಾಜ್ಯದ ಹಿಂದುವಳಿದ ವರ್ಗಗಳ ಇಲಾಖೆ ವ್ಯಾಪ್ತಿಗೆ ಒಳಪಡುವ ಶಾಲೆ ಮತ್ತು ಕಾಲೇಜುಗಳಿಗೆ ಆಹಾರ ಧಾನ್ಯ ಪೂರೈಸುವ ಟೆಂಡರ್‌ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಎತ್ತಿ ಹಿಡಿದಿದೆ.

ಕಲಬುರ್ಗಿಯ ಶಿವಶಕ್ತಿ ದಾಲ್‌ ಇಂಡಸ್ಟ್ರೀಸ್‌ ಸೇರಿ ಒಂಭತ್ತು ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಯಾವುದೇ ಆಧಾರವಿಲ್ಲ ಎಂದು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ. ಅದಾಗ್ಯೂ, ವಿಸ್ತೃತವಾದ ಕ್ರಮಕೈಗೊಂಡಿರುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲು ಪ್ರಕರಣವನ್ನು ಜನವರಿ 30ಕ್ಕೆ ವಿಚಾರಣೆಗೆ ಪಟ್ಟಿ ಮಾಡಲು ರಿಜಿಸ್ಟ್ರಿಗೆ ನ್ಯಾಯಾಲಯ ನಿರ್ದೇಶಿಸಿದೆ.

“ಅರ್ಜಿದಾರರ ಪೈಕಿ ಕೆಲವರು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನರ್ಹರಾಗುತ್ತಾರೆ ಎಂಬ ಕಾರಣಕ್ಕಾಗಿ ನೂತನ ಟೆಂಡರ್‌ ಪ್ರಕ್ರಿಯೆಯು ಸ್ವೇಚ್ಛೆ ಮತ್ತು ಅತಾರ್ಕಿಕವಾಗುವುದಿಲ್ಲ. ರಾಜ್ಯದಲ್ಲಿ 31 ಜಿಲ್ಲೆಗಳಿದ್ದು, 31 ಸಂಸ್ಥೆಗಳಿಗೆ ಟೆಂಡರ್‌ ನೀಡಲಾಗುತ್ತದೆ. ಹೊಸ ವ್ಯವಸ್ಥೆಯಿಂದ ಜಿಲ್ಲಾ ಮಟ್ಟದಲ್ಲಿ ಆಹಾರ ಧಾನ್ಯಗಳ ಪೂರೈಕೆ ಮೇಲೆ ನಿಗಾ ಇಡಬಹುದಾಗಿದೆ. ಟೆಂಡರ್‌ ದಾಖಲೆ ಮತ್ತು ಷರತ್ತುಗಳು ಎಲ್ಲಾ ಜಿಲ್ಲೆಗಳಿಗೆ ಸಮಾನವಾಗಿ ಅನ್ವಸುವುದರಿಂದ ಯಾವುದೇ ತಾರತಮ್ಯ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ತಜ್ಞರ ವರದಿ ಆಧರಿಸಿ ಟೆಂಡರ್‌ ಅವಧಿಯನ್ನು ಒಂದರಿಂದ ಎರಡು ವರ್ಷಕ್ಕೆ ಹೆಚ್ಚಳ ಮಾಡಿರುವ ಸರ್ಕಾರದ ಕ್ರಮವು ನೀತಿಯ ಭಾಗವಾಗಿದೆ. ಟೆಂಡರ್‌ ಅವಧಿ ಹೆಚ್ಚಿಸಿರುವುದು ಯಶಸ್ವಿ ಟೆಂಡರ್‌ದಾರರಿಗೆ ಅನುಕೂಲವಾಗಲಿದ್ದು, ಅವರು ಹೂಡಿದ ಬಂಡವಾಳ ಅಥವಾ ಖರ್ಚನ್ನು ಮರಳಿ ಪಡೆಯಲು ಅನುಕೂಲವಾಗುತ್ತದೆ. ಅಲ್ಲದೇ, ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸುವ ಟೆಂಡರ್‌ದಾರರೂ ನಿರ್ದಿಷ್ಟ ಅವಧಿಯಲ್ಲಿ ತಾವೆಷ್ಟು ಲಾಭ ಪಡೆಯಬಹುದು ಎಂಬುದನ್ನು ನಿರ್ಧರಿಸಿ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲ ಕಲ್ಪಿಸುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಟೆಂಡರ್‌ ಬದಲಾವಣೆ, ಟೆಂಡರ್‌ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ವಿಸ್ತರಣೆ ಮಾಡಿರುವುದು ಸ್ವೇಚ್ಛೆ ಅಥವಾ ಅತಾರ್ಕಿಕವಾಗುವುದಿಲ್ಲ. ತಾಲ್ಲೂಕು ಮಟ್ಟದ ಟೆಂಡರ್‌ ವ್ಯವಸ್ಥೆಯಲ್ಲಿನ ಕೊರತೆಗಳು ಮತ್ತು ಜಿಲ್ಲಾ ಮಟ್ಟದ ಟೆಂಡರ್‌ ವ್ಯವಸ್ಥೆಯ ಅನುಕೂಲತೆಗಳ ಮೇಲೆ ಹತೋಟಿ ಹೊಂದಲು ಸರ್ಕಾರವು ನೀತಿಯ ಭಾಗವಾಗಿ ನಿರ್ಧಾರ ಕೈಗೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಹಿಂದೆ ಜಾರಿಯಲ್ಲಿದ್ದ ತಾಲ್ಲೂಕು ಮಟ್ಟದ ಮತ್ತು ಒಂದು ವರ್ಷದ ಟೆಂಡರ್‌ ವ್ಯವಸ್ಥೆಯಿಂದ ಸ್ಥಳೀಯ ಗುತ್ತಿಗೆದಾರರು ಸುಲಭವಾಗಿ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲವಾಗಿತ್ತು. ಇದರಿಂದ ಸಾರಿಗೆ ವೆಚ್ಚ ಮತ್ತು ದರದಲ್ಲಿ ಸ್ಪರ್ಧೆ ಇರುತ್ತಿರಲಿಲ್ಲ. ಈಗ ಸರ್ಕಾರ ಜಾರಿಗೊಳಿಸಿರುವ ಜಿಲ್ಲಾ ಮಟ್ಟದ ವ್ಯವಸ್ಥೆಯು ಅತಿ ಹೆಚ್ಚು ಗುಣಮಟ್ಟದ ಮಾನದಂಡಗಳಿಂದಾಗಿ ಸಣ್ಣ ಮತ್ತು ಸ್ಥಳೀಯ ಗುತ್ತಿಗೆದಾರರು ಹೊರಬೀಳಲಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ಬಿಡ್‌ನಲ್ಲಿ ಭಾಗವಹಿಸಿ ವಿಫಲರಾಗಿದ್ದ ಅರ್ಜಿದಾರರು ಸರ್ಕಾರವು 2024ರಲ್ಲಿ ಜಾರಿಗೊಳಿಸಿರುವ ನೂತನ ಟೆಂಡರ್‌ ಅಧಿಸೂಚನೆಯನ್ನು ಪ್ರಶ್ನಿಸಿದ್ದರು.

Shiva Shakthi Dal Industries Vs State of Karnataka.pdf
Preview