Justice E S Indiresh and Karnataka HC (Kalburgi Bench) 
ಸುದ್ದಿಗಳು

ಅಪ್ರಾಪ್ತನಿಗೆ ನೀಡಿದ್ದ ನೇಮಕಾತಿ ಆದೇಶ ಹಿಂಪಡೆದ ಸಾಹಿತ್ಯ ಅಕಾಡೆಮಿ ನಡೆಗೆ ಹೈಕೋರ್ಟ್‌ ಸಹಮತ

“ಹಾಲಿ ಪ್ರಕರಣಕ್ಕೆ ಬಾಲ ಕಾರ್ಮಿಕ ತಿದ್ದುಪಡಿ ನಿಯಮಗಳು ಅನ್ವಯಿಸುತ್ತವೆ. ಹೀಗಾಗಿ, ಸಾಹಿತ್ಯ ಅಕಾಡೆಮಿ ನೇಮಕಾತಿ ಹಿಂಪಡೆದಿರುವುದು ಸರಿಯಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

Bar & Bench

ನೇಮಕಾತಿ ಸಂದರ್ಭದಲ್ಲಿ 15 ವರ್ಷ ಆರು ತಿಂಗಳಾಗಿದ್ದ ಅಪ್ರಾಪ್ತನಿಗೆ ಉದ್ಯೋಗ ನೀಡಿದ್ದನ್ನು ಹಿಂಪಡೆದಿರುವ ಸಾಹಿತ್ಯ ಅಕಾಡೆಮಿ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಎತ್ತಿ ಹಿಡಿದಿದೆ.

ಬೀದರ್‌ನ ವಿವೇಕ್‌ ಹೆಬ್ಬಾಳೆ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಇ ಎಸ್‌ ಇಂದಿರೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

ನೇಮಕಾತಿಯ ಸಂದರ್ಭದಲ್ಲಿ ಅರ್ಜಿದಾರರ ವಯಸ್ಸು ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ನಿಯಮಗಳು 2017ರ ನಿಯಮ 2ಬಿ ಗೆ ವಿರುದ್ಧವಾಗಿತ್ತು ಎಂದು ನ್ಯಾಯಾಲಯ ಹೇಳಿದೆ. “ಹಾಲಿ ಪ್ರಕರಣಕ್ಕೆ ಬಾಲ ಕಾರ್ಮಿಕ ತಿದ್ದುಪಡಿ ನಿಯಮಗಳು ಅನ್ವಯಿಸುತ್ತವೆ. ಹೀಗಾಗಿ, ಸಾಹಿತ್ಯ ಅಕಾಡೆಮಿ ನೇಮಕಾತಿ ಹಿಂಪಡೆದಿರುವುದು ಸರಿಯಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ತನ್ನನ್ನು ಸೇಲ್ಸ್‌ ಕಮ್‌ ಎಕ್ಸಿಬಿಷನ್‌ ಅಸಿಸ್ಟೆಂಟ್‌ ಆಗಿ ನೇಮಕ ಮಾಡಿದ್ದ ಆದೇಶವನ್ನು ಹಿಂಪಡೆದಿರುವ ಸಾಹಿತ್ಯ ಅಕಾಡೆಮಿಯ ಎರಡು ಆದೇಶಗಳನ್ನು ವಜಾ ಮಾಡುವಂತೆ ಅರ್ಜಿದಾರರು ಕೋರಿದ್ದರು. ಸೇಲ್ಸ್‌ ಕಮ್‌ ಎಕ್ಸಿಬಿಷನ್‌ ಅಸಿಸ್ಟೆಂಟ್‌ ಹುದ್ದೆಗೆ ನೇಮಕಕ್ಕೆ ಸಂಬಂಧಿಸಿದಂತೆ ಸಾಹಿತ್ಯ ಅಕಾಡೆಮಿಯು ಅರ್ಜಿ ಆಹ್ವಾನಿಸಿತ್ತು. ನೇಮಕಾತಿ ಆದೇಶದಲ್ಲಿನ ಸಂಬಂಧಿತ ದಾಖಲೆ ಪ್ರಸ್ತುತಪಡಿಸುವುದಕ್ಕೆ ಒಳಪಟ್ಟು ಅರ್ಜಿದಾರರನ್ನು ಆಯ್ಕೆ ಮಾಡಲಾಗಿತ್ತು.

ಆದರೆ, 2022ರ ಜನವರಿ 24ರಂದು ಪತ್ರ ಬರೆದಿದ್ದ ಸಾಹಿತ್ಯ ಅಕಾಡೆಮಿಯು ಅರ್ಜಿದಾರರಿಗೆ 15 ವರ್ಷ 6 ತಿಂಗಳಾಗಿರುವುದರಿಂದ ನೇಮಕಾತಿ ಆದೇಶ ಹಿಂಪಡೆಯಲಾಗಿದೆ ಎಂದು ತಿಳಿಸಿತ್ತು. ಹುದ್ದೆಗೆ ಸೂಕ್ತವಾದ ಅನುಭವವನ್ನು ಅರ್ಜಿದಾರರು ಹೊಂದಿದ್ದು, ಅನುಭವ ಸರ್ಟಿಫಿಕೇಟ್‌ ಸಲ್ಲಿಸಿದ್ದಾರೆ. ಆದರೆ, ಅರ್ಜಿದಾರರ ತಾಯಿ ಬುಕ್‌ ಹೌಸ್‌ ಹೊಂದಿದ್ದು, ಅವರು ನೀಡಿರುವ ನಕಲಿ ಅನುಭವ ಸರ್ಟಿಫಿಕೇಟ್‌ ಸಲ್ಲಿಸಿದ್ದಾರೆ. ಇಡೀ ಪ್ರಕರಣ ಅರ್ಜಿದಾರರ ವಯಸ್ಸಿನ ಸುತ್ತ ನಡೆಯುತ್ತಿದ್ದು, ನೇಮಕಾತಿ ಸಂದರ್ಭದಲ್ಲಿ ಅರ್ಜಿದಾರರಿಗೆ 15 ವರ್ಷ 6 ತಿಂಗಳಾಗಿತ್ತು ಎಂಬುದು ಸಾಹಿತ್ಯ ಅಕಾಡೆಮಿಯ ವಾದವಾಗಿತ್ತು.

ನಿರ್ದಿಷ್ಟ ವಯೋಮಾನಕ್ಕಿಂತ ಕೆಳಗಿದ್ದಲ್ಲಿ ಉದ್ಯೋಗ ನೀಡುವುದಕ್ಕೆ ಬಾಲ ಕಾರ್ಮಿಕ ತಿದ್ದುಪಡಿ ನಿಯಮ 2ಬಿ ಅಡಿ ಅವಕಾಶವಿಲ್ಲ. ಹಾಗಾಗಿ ನೇಮಕಾತಿ ಆದೇಶ ಹಿಂಪಡೆಯುವ ಮೂಲಕ ಪ್ರತಿವಾದಿಗಳು ಅದನ್ನು ಸಮರ್ಥಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ, ಅರ್ಜಿಯನ್ನು ವಜಾ ಮಾಡಿದೆ.

ಅರ್ಜಿದಾರರ ಪರವಾಗಿ ವಕೀಲ ನಿತೇಶ್‌ ಪಡಿಯಾಲ, ಪ್ರತಿವಾದಿಗಳ ಪರವಾಗಿ ವಕೀಲ ಆಶೀಷ್‌ ದೀಕ್ಷಿತ್‌ ವಾದಿಸಿದ್ದರು.

Vivek Hebbale Vs Sahitya Akademi.pdf
Preview