Karnataka High Court 
ಸುದ್ದಿಗಳು

₹300 ಲಂಚ ಪಡೆದಿದ್ದ ಟೈಪಿಸ್ಟ್‌ ವಜಾ ಮಾಡಿದ್ದ ರಾಜ್ಯ ಸರ್ಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಸಾರ್ವಜನಿಕ ಸೇವಕರು ಲಂಚಕ್ಕೆ ಬೇಡಿಕೆ ಇರಿಸುವುದು ಮತ್ತು ಪಡೆಯುವುದು ಸಾಮಾಜಿಕ ನೈತಿಕತೆಯ ಪಾಲಿಗೆ ಗಂಭೀರ ವಿಷಯ ಎಂದಿರುವ ನ್ಯಾಯಾಲಯ.

Bar & Bench

ಮೈಸೂರು ವಲಯದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಯ ಮಹಿಳಾ ಟೈಪಿಸ್ಟ್‌ ₹300 ಲಂಚ ಪಡೆದಿದ್ದಾರೆ ಎಂಬ ಆರೋಪದಡಿ ಅವರನ್ನು ಸೇವೆಯಿಂದ ವಜಾಗೊಳಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿ ಹಿಡಿದಿದೆ.

ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಜಿ ಪಂಡಿತ್ ಮತ್ತು ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.  ಪ್ರತಿವಾದಿ ಟೈಪಿಸ್ಟ್‌ಗೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಕೆಎಟಿ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.

ಸೇವೆಯಿಂದ ವಜಾಗೊಳಿಸಿದ್ದ ಸರ್ಕಾರದ ಆದೇಶ ಮಾರ್ಪಾಡು ಮಾಡಿರುವ ಕೆಎಟಿ, ಕಡ್ಡಾಯ ನಿವೃತ್ತಿ ಘೋಷಣೆಗೆ ನಿರ್ದೇಶಿಸಿದೆ. ಆದರೆ, ಈ ರೀತಿಯ ಆದೇಶ ನೀಡಲು ಕೆಎಟಿಗೆ ಅಧಿಕಾರವಿಲ್ಲ. ಸಾರ್ವಜನಿಕ ಸೇವಕರು ಲಂಚಕ್ಕೆ ಬೇಡಿಕೆ ಇರಿಸುವುದು ಮತ್ತು ಪಡೆಯುವುದು ಸಾಮಾಜಿಕ ನೈತಿಕತೆಯ ಪಾಲಿಗೆ ಗಂಭೀರ ವಿಷಯ ಎಂದು ಪೀಠ ಅಭಿಪ್ರಾಯಪಟ್ಟಿದೆ.

ದುರ್ನಡತೆ ಆರೋಪದಡಿ ಪ್ರತಿವಾದಿ ಟೈಪಿಸ್ಟ್‌ ಮಹಿಳೆಯನ್ನು ರಾಜ್ಯ ಸರ್ಕಾರ, ಕರ್ನಾಟಕ ನಾಗರಿಕ ಸೇವೆ (ನಡವಳಿಕೆ) ನಿಯಮಗಳು–1966ರ ಅಡಿಯಲ್ಲಿ 2014ರ ಜುಲೈ 24ರಂದು ಸೇವೆಯಿಂದ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಕೆಎಟಿ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ್ದ ಕೆಎಟಿಯು  ಇಲಾಖಾ ವಿಚಾರಣೆಯಲ್ಲಿ ಆರೋಪ ಸಾಬೀತಾಗಿಲ್ಲ ಎಂಬ ಕಾರಣಕ್ಕೆ ಸರ್ಕಾರದ ವಜಾ ಆದೇಶವನ್ನು ರದ್ದುಪಡಿಸಿತ್ತು ಮತ್ತು ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

State of Karnataka Vs H S Kanthi.pdf
Preview