Asianet Suvarna News kannada, MLA Vinay Kulkarni & Karnataka HC 
ಸುದ್ದಿಗಳು

ಶಾಸಕ ವಿನಯ್‌ ವಿರುದ್ಧ ಸುದ್ದಿ: ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ನ್ಯಾಯಾಂಗ ನಿಂದನೆ ಎಚ್ಚರಿಕೆ ನೀಡಿದ ಹೈಕೋರ್ಟ್‌

ನ್ಯಾಯಾಲಯವು ಹಿಂದೆ ನೀಡಿರುವ ನಿರ್ದೇಶನ ಅನುಪಾಲಿಸಿ, ತುರ್ತು ಕ್ರಮ ಕೈಗೊಂಡು ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ವಿಡಿಯೊ, ಕ್ಲಿಪ್‌, ಶಾರ್ಟ್ಸ್‌ ಅನ್ನು ತೆಗೆದು ಹಾಕಬೇಕು ಎಂದ ಪೀಠ.

Bar & Bench

ನ್ಯಾಯಾಲಯ ಆದೇಶದ ಹೊರತಾಗಿಯೂ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ವಿರುದ್ಧ ಆಕ್ಷೇಪಾರ್ಹ, ನಕಾರಾತ್ಮಕ, ವ್ಯಂಗ್ಯ ಹಾಗೂ ಆಧಾರರಹಿತ ಚಿತ್ರ, ವಿಡಿಯೋ, ಸುದ್ದಿ, ಲೇಖನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುವುದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ಮಾಲೀಕತ್ವದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಎಚ್ಚರಿಸಿದೆ.

ಯೂಟ್ಯೂಬ್‌, ಫೇಸ್‌ಬುಕ್‌ ಮತ್ತು ವಾಟ್ಸಾಪ್‌ ವೇದಿಕೆಗಳಲ್ಲಿ ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ಪ್ರೈವೇಟ್‌ ಲಿಮಿಟೆಡ್‌ ಅಪ್‌ಲೋಡ್‌ ಮಾಡಿರುವ ವಿಡಿಯೋ, ಕ್ಲಿಪ್‌ ತೆಗೆಯಲು ಮತ್ತು ಖಾಸಗಿ ತನಿಖೆ ಮಾಡದಂತೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನಿರ್ಬಂಧಿಸಲು ಕೇಂದ್ರ ಗೃಹ ಹಾಗೂ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಧಾರವಾಡ ಶಾಸಕ ವಿನಯ್‌ ಕುಲಕರ್ಣಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ವಾದ ಆಲಿಸಿದ ಪೀಠವು “ಈ ನ್ಯಾಯಾಲಯ ಮಾಡಿರುವ ಆದೇಶದ ಹೊರತಾಗಿಯೂ ವಿನಯ್‌ ಕುಲಕರ್ಣಿ ವಿರುದ್ಧ ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌, ಫೇಸ್‌ಬುಕ್‌, ಯೂಟ್ಯೂಬ್‌ ಮತ್ತು ವಾಟ್ಸಾಪ್‌ ಆಕ್ಷೇಪಾರ್ಹ ಸುದ್ದಿ ಪ್ರಕಟಿಸುವುದು ನ್ಯಾಯಾಂಗ ನಿಂದನೆಯಾಗಲಿದೆ. ಈ ನ್ಯಾಯಾಲಯವು ಹಿಂದೆ ನೀಡಿರುವ ನಿರ್ದೇಶನವನ್ನು ಅನುಪಾಲಿಸಿ, ತುರ್ತು ಕ್ರಮವನ್ನು ಪ್ರತಿವಾದಿಗಳು ಕೈಗೊಂಡು ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ವಿಡಿಯೊ, ಕ್ಲಿಪ್‌, ಶಾರ್ಟ್ಸ್‌ ಅನ್ನು ತೆಗೆದು ಹಾಕಬೇಕು” ಎಂದು ನಿರ್ದೇಶಿಸಿದೆ.

ಅಲ್ಲದೇ, ಕೇಂದ್ರ ಗೃಹ ಮತ್ತು ಮಾಹಿತಿ ಮತ್ತು ಪ್ರಸಾರ ಇಲಾಖೆ, ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌, ಯೂಟ್ಯೂಬ್‌, ಫೇಸ್‌ಬುಕ್‌ ಮತ್ತು ವಾಟ್ಸಾಪ್‌ಗಳಿಗೆ ನ್ಯಾಯಾಲಯವು ನೋಟಿಸ್‌ ಜಾರಿ ಮಾಡಿದೆ.

ಅರ್ಜಿದಾರರ ಪರ ವಕೀಲರು “ವಿನಯ್‌ ಕುಲಕರ್ಣಿ ಕಳೆದ ವರ್ಷ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಲ್ಲಿ ಹೂಡಿದ್ದ ಮೂಲದಾವೆಯಲ್ಲಿ ಆಕ್ಷೇಪಾರ್ಹ ಸುದ್ದಿ, ಚಿತ್ರ, ವಿಡಿಯೊಗಳನ್ನು ಅಪ್‌ಲೋಡ್‌ ಮಾಡದಂತೆ ಏಕಪಕ್ಷೀಯ ಆದೇಶ ಮಾಡಿದೆ. ಬೇರೊಂದು ಪ್ರಕರಣದಲ್ಲಿ ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ಗೆ ಫೇಸ್‌ಬುಕ್‌, ಯೂಟ್ಯೂಬ್‌ ಮತ್ತು ವಾಟ್ಸಾಪ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಆಕ್ಷೇಪಾರ್ಹವಾದ ಸುದ್ದಿ, ವಿಡಿಯೋ ಮತ್ತು ಚಿತ್ರ ತೆಗೆಯುವಂತೆ ಆದೇಶಿಸಿದೆ. ಅದಾಗ್ಯೂ, ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌, ಯೂಟ್ಯೂಬ್‌, ಫೇಸ್‌ಬುಕ್‌ ಮತ್ತು ವಾಟ್ಸಾಪ್‌ನಲ್ಲಿ ಆಕ್ಷೇಪಾರ್ಹವಾದ ವಿಡಿಯೊ, ಕ್ಲಿಪ್‌, ಶಾರ್ಟ್‌ ಇತ್ಯಾದಿ ಪ್ರಕಟಿಸಲಾಗುತ್ತಿದೆ” ಎಂದಿದ್ದರು.

ವಿನಯ್‌ ಕುಲಕರ್ಣಿ ವಿರುದ್ಧ ಆಕ್ಷೇಪಾರ್ಹ, ಆಧಾರರಹಿತ, ವ್ಯಂಗ್ಯಭರಿತ ಸುದ್ದಿ, ಚಿತ್ರ, ವಿಡಿಯೊ ಲೇಖನ ಪ್ರಕಟಿಸದಂತೆ 2024ರ ಸೆಪ್ಟೆಂಬರ್‌ 27ರಂದು ಬೆಂಗಳೂರಿನ 20ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಸಾಮಾಜಿಕ ಮಾಧ್ಯಮಗಳು ಸೇರಿ 30 ಮುಖ್ಯವಾಹಿನಿ ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದೆ.

ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಬಿಜೆಪಿ ಮುಖಂಡ ಯೋಗೀಶ್‌ ಗೌಡ ಹತ್ಯೆ ಪ್ರಕರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ವಿನಯ್‌ ಕುಲರ್ಣಿ ಆರೋಪಿಯಾಗಿದ್ದಾರೆ.