ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ರಾಜ್ಯ ಖಾಸಗಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸಂಸ್ಥೆಯ ಒಕ್ಕೂಟ 2022ರಲ್ಲಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ದಂಡ ವಿಧಿಸುವ ಎಚ್ಚರಿಕೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ನೀಡಿದೆ.
ರಾಜ್ಯ ಖಾಸಗಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸಂಸ್ಥೆಯ ಒಕ್ಕೂಟವು ಕಾಯಿದೆಯ ಸೆಕ್ಷನ್‌ಗಳಾದ 3, 4, 10, 12, 14, 43, 44, 55 (2) (i) (ಎಂ) ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠದ ಮುಂದೆ ಇಂದು ವಿಚಾರಣೆಗೆ ನಿಗದಿಯಾಗಿತ್ತು.
ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲ ಎಂ ಎನ್ ಕುಮಾರ್ ಅವರು “ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಆಗ ಪೀಠವು “ಕಳೆದ ಬಾರಿಯೂ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದ್ದೀರಿ. ಈಗ ಮತ್ತೆ ಕಾಲಾವಕಾಶ ಕೇಳುತ್ತಿದ್ದೀರಿ. ಇದೆ ಆಯಿತಲ್ಲಾ… ಕೇಂದ್ರ ಸರ್ಕಾರ ಎಲ್ಲಾ ಪ್ರಕರಣಗಳಲ್ಲಿ ಕಾಲಾವಕಾಶ ಕೇಳುತ್ತಲೇ ಇರುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿತು.
ಕೇಂದ್ರ ಸರ್ಕಾರ ಹಾಗೂ ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗದ ಮನವಿ ತಿರಸ್ಕರಿಸಿದ ಪೀಠವು ಮುಂದಿನ ವಿಚಾರಣೆ ವೇಳೆಗೆ ಆಕ್ಷೇಪಣೆ ಸಲ್ಲಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು.
ನವೆಂಬರ್ 25ರಂದು ವಿಚಾರಣೆ ನಡೆಸಿದ್ದ ನ್ಯಾ. ಸೂರಜ್ ಗೋವಿಂದರಾಜ್ ಅವರ ಪೀಠವು ಡಿಸೆಂಬರ್ 4ರ ಒಳಗೆ ಆಕ್ಷೇಪಣೆ ಸಲ್ಲಿಸದಿದ್ದರೆ ಅದನ್ನು ಪರಿಗಣಿಸಿ, ಅರ್ಜಿ ವಿಚಾರಣೆ ಮುಂದುವರಿಸುವುದಾಗಿ ಆದೇಶಿಸಿತ್ತು.