ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ವಿರುದ್ಧದ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿಯನ್ನು ವಜಾ ಮಾಡಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠವು ನವೆಂಬರ್ 23ರಂದು ವಿಚಾರಣೆ ನಡೆಸಲಿದೆ.
ಹಿರಿಯ ವಕೀಲ ಡಾ. ಅಭಿಷೇಕ ಮನು ಸಿಂಘ್ವಿ ಅವರು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠದ ಮುಂದೆ ಮೇಲ್ಮನವಿಯನ್ನು ಶುಕ್ರವಾರ ಅಥವಾ ಶನಿವಾರ ವಿಚಾರಣೆಗೆ ಪರಿಗಣಿಸಬೇಕು ಎಂದು ಇಂದು ಉಲ್ಲೇಖಿಸಿದರು.
ಆಗ ಪೀಠವು ನಾಳೆ ಸಾಧ್ಯವಿಲ್ಲ. ನವೆಂಬರ್ 23ರಂದು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು.
ರಾಜ್ಯಪಾಲರ ಆದೇಶ ರದ್ದತಿಗೆ ಕೋರಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 24ರಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಇದಾದ ಸರಿಸುಮಾರು ಒಂದು ತಿಂಗಳ ಬಳಿಕ ವಕೀಲ ಶತಭಿಷ್ ಶಿವಣ್ಣ ಅವರ ಮೂಲಕ ಮೇಲ್ಮನವಿ ಸಲ್ಲಿಕೆಯಾಗಿದೆ.
ಹೈಕೋರ್ಟ್‌ನ ಏಕಸದಸ್ಯ ಪೀಠವು ರಾಜ್ಯಪಾಲರ ಅನುಮತಿ ಎತ್ತಿ ಹಿಡಿಯುತ್ತಿದ್ದಂತೆ ವಿಶೇಷ ಸತ್ರ ನ್ಯಾಯಾಲಯವು ತನಿಖೆ ನಡೆಸಲು ಮೈಸೂರು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಅಲ್ಲದೇ, ಡಿಸೆಂಬರ್ 24ರ ಒಳಗೆ ತನಿಖಾ ವರದಿ ಸಲ್ಲಿಸಲು ನಿರ್ದೇಶಿಸಿತ್ತು. ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರು ಆಕ್ಷೇಪಾರ್ಹವಾದ 14 ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದ್ದರು.