ಸಂಸತ್ ಸದಸ್ಯರು ಮತ್ತು ವಿಧಾನಸಭಾ ಸದಸ್ಯರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿದೆ.
ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ಆಲಿಸಲೆಂದೇ ರೂಪಿಸಲಾದ ನ್ಯಾಯಾಲಯಗಳು ವಾರಕ್ಕೊಮ್ಮೆಯಾದರೂ ಅಂತಹ ಪ್ರಕರಣಗಳನ್ನು ಪಟ್ಟಿ ಮಾಡುವಂತೆ ಜೊತೆಗೆ ತೀರಾ ಅಗತ್ಯ ಇಲ್ಲದೇ ಇದ್ದಲ್ಲಿ ಪ್ರಕರಣವನ್ನು ಮುಂದೂಡದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ವಿಭಾಗೀಯ ಪೀಠ ಸೂಚಿಸಿತು.
ಸಾಕ್ಷಿಯ ವಿಚಾರಣೆ/ಪಾಟೀ ಸವಾಲು ಒಂದು ನಿರ್ದಿಷ್ಟ ಗಡುವನ್ನು ಮೀರಿದಾಗ, ಅಂತಹ ಸಾಕ್ಷಿಯ ಸಾಕ್ಷ್ಯ ನುಡಿಯುವಿಕೆ ಪೂರ್ಣಗೊಳ್ಳುವವರೆಗೆ ಪ್ರಕರಣವನ್ನು ಸಾಧ್ಯವಾದಷ್ಟು ದಿನನಿತ್ಯದ ಆಧಾರದ ಮೇಲೆ ಪಟ್ಟಿ ಮಾಡಬೇಕು ಎಂದು ಕೂಡ ಹೈಕೋರ್ಟ್ ತಿಳಿಸಿದೆ.
ಅಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಮರುಪರಿಶೀಲನಾ ಅರ್ಜಿಗಳು ನಿಗದಿತ ಸೆಷನ್ಸ್ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದರೆ, ಅವುಗಳನ್ನು ಆರು ತಿಂಗಳೊಳಗೆ ವಿಲೇವಾರಿ ಮಾಡಲು ಎಲ್ಲಾ ಯತ್ನ ಮಾಡಬೇಕು. ಅಂತಹ ಮರುಪರಿಶೀಲನಾ ಅರ್ಜಿಗಳು ಅಥವಾ ಇತರೆ ಅರ್ಜಿಗಳು ಹೈಕೋರ್ಟ್‌ನ ಏಕ ಸದಸ್ಯ ಪೀಠದಲ್ಲಿ ಇತ್ಯರ್ಥವಾಗಿರದೆ ಇದ್ದರೆ, ಅವುಗಳನ್ನು ಸಾಧ್ಯವಾದಷ್ಟು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಅದು ಸೂಚಿಸಿದೆ.
“ವಿಚಾರಣೆಗೆ ತಡೆಯೊಡ್ಡಿ ಆದೇಶ ನೀಡಲಾಗಿದ್ದು ಆರು ತಿಂಗಳಿಗಿಂತ ಹೆಚ್ಚು ಅವಧಿಯವರೆಗೆ ಮುಂದುವರಿಸುತ್ತಿರುವ ಪ್ರಕರಣಗಳನ್ನು ಹೈಕೋರ್ಟ್‌ನ ಸಂಬಂಧಪಟ್ಟ ಪೀಠಗಳು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ರಿಜಿಸ್ಟ್ರಾರ್ ಜನರಲ್ ಅವರು ಮುಂದಿನ ವಿಚಾರಣೆಗೂ ಮುನ್ನ ಈ ಪ್ರಕರಣಗಳ ಸ್ಥಿತಿ ವರದಿಯನ್ನು ಸಲ್ಲಿಸಬೇಕು”ಎಂದು ನ್ಯಾಯಾಲಯ ಆದೇಶಿಸಿದೆ.
ಸಂಸದರು ಮತ್ತು ಶಾಸಕರ ವಿರುದ್ಧ ಬಾಕಿ ಇರುವ ಪ್ರಕರಣಗಳ ಸಂಖ್ಯೆ, ದಾಖಲಾದ ವರ್ಷ, ಪ್ರಕ್ರಿಯೆಯ ಹಂತ ಇತ್ಯಾದಿ ವಿವರಗಳನ್ನು ಒದಗಿಸುವ ಸ್ವತಂತ್ರ ವಿಭಾಗವನ್ನು ಹೈಕೋರ್ಟ್ ಜಾಲತಾಣದಲ್ಲಿ ಸೃಷ್ಟಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು 2020ರಲ್ಲಿ ಆರಂಭಿಸಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಪೀಠ ಈ ನಿರ್ದೇಶನಗಳನ್ನು ನೀಡಿದೆ.
ನಿಯೋಜಿತ ನ್ಯಾಯಾಲಯಗಳು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿರುವ ಹೈಕೋರ್ಟ್, ತಿಂಗಳಿಗೊಮ್ಮೆ ಕೆಳ ನ್ಯಾಯಾಲಯಗಳಿಂದ ಪ್ರಗತಿ ವರದಿಗಳನ್ನು ಪಡೆದು ಕ್ರೋಢಿಕೃತ ವರದಿಯನ್ನು ತನಗೆ ಸಲ್ಲಿಸುವಂತೆ ಸೂಚಿಸಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]