Swiggy, CCI and Karnataka HC 
ಸುದ್ದಿಗಳು

ಸ್ವಿಗ್ಗಿ ವಾದ ಆಲಿಸಿ, ದತ್ತಾಂಶ ಹಂಚಿಕೆ ಆದೇಶ ಮರುಪರಿಶೀಲಿಸಿ: ಸಿಸಿಐಗೆ ಹೈಕೋರ್ಟ್‌ ಸಲಹೆ

Bar & Bench

ಸ್ವಿಗ್ಗಿಯ ಗೌಪ್ಯ ಮಾಹಿತಿಯನ್ನು ರೆಸ್ಟೋರೆಂಟ್‌ ಸಂಸ್ಥೆ ಜೊತೆ ಹಂಚಿಕೊಳ್ಳುವ ಕುರಿತಾದ ತನ್ನ ನಿಲುವನ್ನು ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಮರುಪರಿಶೀಲಿಸಬಹುದೇ ಎಂದು ಬುಧವಾರ ಕರ್ನಾಟಕ ಹೈಕೋರ್ಟ್‌ ಪ್ರಶ್ನಿಸಿದೆ.

ಈ ನಿಟ್ಟಿನಲ್ಲಿ ವಿಸ್ತೃತ ಆದೇಶ ಮಾಡುವುದಕ್ಕೂ ಮುನ್ನ ಭಾರತೀಯ ಸ್ಪರ್ಧಾ ಆಯೋಗವು ಸ್ವಿಗ್ಗಿ ಸಹಿತ ಪ್ರಕರಣದ ಎಲ್ಲ ಪಕ್ಷಕಾರರನ್ನು ಆಲಿಸಲು ಸಿಸಿಐ ಮುಕ್ತವಾಗಿದೆಯೇ ಎಂದು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠವು ಸಿಸಿಐಯನ್ನು ಕೇಳಿತು.

ಎಲ್ಲಾ ಪಕ್ಷಕಾರರನ್ನು ಆಲಿಸಿ ವಿವಾದ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಪ್ರಕರಣವನ್ನು ಸಿಸಿಐಗೆ ಮರಳಿಸುವುದರಿಂದ ಎಲ್ಲರ ಸಮಯ ಉಳಿಯಲಿದೆ ಎಂದು ನ್ಯಾಯಾಲಯ ಹೇಳಿದೆ.

ಸಿಸಿಐ ಪ್ರತಿನಿಧಿಸಿದ್ದ ವಕೀಲೆ ನಯನತಾರಾ ಬಿ ಜಿ ಅವರು ಈ ಸಂಬಂಧ ಸೂಚನೆ ಪಡೆಯಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಜೂನ್‌ 26ಕ್ಕೆ ಮುಂದೂಡಿದೆ.

ಸ್ವಿಗ್ಗಿ ಮತ್ತು ಜೊಮೆಟೊ ಸಂಸ್ಥೆಗಳು ಸ್ಪರ್ಧಾ ವಿರೋಧಿ ಕೆಲಸದಲ್ಲಿ ನಿರತವಾಗಿವೆ ಎಂಬುದರ ಸಂಬಂಧ ಸಿಸಿಐನ ಮಹಾನಿರ್ದೇಶಕರು ನೀಡಿರುವ ವರದಿಯನ್ನು ಪಡೆಯುವ ಸಂಬಂಧ ಭಾರತೀಯ ರಾಷ್ಟ್ರೀಯ ರೆಸ್ಟೋರೆಂಟ್‌ (ಎನ್‌ಆರ್‌ಎಐ) ಅನ್ನು ಗೌಪ್ಯ ವಲಯಕ್ಕೆ ಸೇರಲು ಸಿಸಿಐ ಅನುಮತಿಸಿತ್ತು.

ಆರಂಭದಲ್ಲಿ ಸ್ವಿಗ್ಗಿ ಮತ್ತು ಜೊಮೆಟೊ ವಿರುದ್ಧ ಸಿಸಿಐಗೆ ಎನ್‌ಆರ್‌ಎಐ ದೂರು ನೀಡಿತ್ತು. ಇದರ ಭಾಗವಾಗಿ ಸಿಸಿಐ ಮಹಾನಿರ್ದೇಶಕರು ತನಿಖೆ ನಡೆಸಿದ್ದರು. ಸಿಸಿಐ ಡಿಜಿ ವರದಿಯು ಸ್ವಿಗ್ಗಿ ಮತ್ತು ಜೊಮೆಟೊ ಬಗ್ಗೆ ಸೂಕ್ಷ್ಮವಾದ ವ್ಯಾವಹಾರಿಕ ಅಂಶಗಳನ್ನು ಒಳಗೊಂಡಿತ್ತು. ಈ ಮಾಹಿತಿಯನ್ನು ಎನ್‌ಆರ್‌ಎಐ ಪಡೆಯಲು ಅನುಮತಿಸಿದ್ದನ್ನು ಸ್ವಿಗ್ಗಿಯು ಪ್ರಶ್ನಿಸಿದೆ.