ವೈವಾಹಿಕ ಪ್ರಕರಣವೊಂದರಲ್ಲಿ ಪತ್ನಿಯ ಪರವಾಗಿ ವಾದಿಸಿದ್ದ ವಾಕ್ ಮತ್ತು ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ಅವರನ್ನು ಈಚೆಗೆ ಕೊಂಡಾಡಿರುವ ಕರ್ನಾಟಕ ಹೈಕೋರ್ಟ್, ನ್ಯಾಯಾಲಯದ ಮುಂದೆ ಸಾರಾ ಅವರ ಮಂಡನೆಯು ಆದರ್ಶನೀಯ ಎಂದು ಮೆಚ್ಚುಗೆ ದಾಖಲಿಸಿದೆ. ಅಲ್ಲದೇ, “ನ್ಯಾಯವು ಶ್ರವಣದ ಮೂಲಕ ಮಾತ್ರವಲ್ಲ, ಹೃದಯ ಮೂಲಕವೂ ಕೇಳುತ್ತದೆ ಎಂಬ ಪ್ರಕಾಶಮಾನವಾದ ಸಂದೇಶ ರವಾನೆಯಾಗಿದೆ” ಎಂದು ವ್ಯಾಖ್ಯಾನಿಸಿದೆ.
ತನ್ನ ವಿರುದ್ಧ ವಲಸೆ ಇಲಾಖೆಯು ಹೊರಡಿಸಿರುವ ಲುಕ್‌ಔಟ್ ಸುತ್ತೋಲೆ ರದ್ದುಪಡಿಸುವಂತೆ ಕೋರಿ ಸ್ಕಾಟ್ಲೆಂಡ್ ನಿವಾಸಿಯಾಗಿರುವ ಅಮಿತ್ ಅಶೋಕ್ ವ್ಯಾಸ್ ಮತ್ತು ಆತನ ಪತ್ನಿ ಸವಿತಾ ಪರೀಕ್ ಅವರು ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ.
“ವಾಕ್ ಮತ್ತು ಶ್ರವಣದೋಷವುಳ್ಳ ಸಾರಾ ಸನ್ನಿ ಅವರು ಎಲ್ಲಾ ಅನುಮಾನದ ತರಂಗವನ್ನು (ಡೆಸಿಬಲ್) ಹಿಮ್ಮೆಟ್ಟಿಸಿ, ವಾಕ್ಚಾತುರ್ಯ ಮತ್ತು ಶಾಂತಚಿತ್ತರಾಗಿ ತನ್ನ ವಾದ ಮಂಡಿಸಿದ್ದು, ಇದು ಹಿರಿಯ ವಕೀಲರಲ್ಲಿನ ಬದ್ಧತೆಯ ಪ್ರತಿಬಿಂಬದಂತೆ ಇತ್ತು” ಎಂದು ನ್ಯಾಯಾಲಯ ಶ್ಲಾಘಿಸಿದೆ.
“ಶ್ರವಣದೋಷವುಳ್ಳ ವಕೀಲರು ಅಪರೂಪದ ಅಲ್ಪಸಂಖ್ಯಾತರು ನಿರಾಕರಿಸಲಾಗದ ಸತ್ಯ. ಸಮಾನತೆಯ ರಕ್ಷಕರಾದ ಸಾಂವಿಧಾನಿಕ ನ್ಯಾಯಾಲಯಗಳು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅವರ ಪೂರ್ಣ ಭಾಗವಹಿಸುವಿಕೆಯ ನಡುವೆ ಇರುವ ಧ್ವನಿ ತಡೆಗೋಡೆಯನ್ನು ಮುರಿಯಲು ಸಹಾಯ ಮಾಡಲು ಅಂತಹ ವಕೀಲರಿಗೆ ಅನುಕೂಲ ಮಾಡಿಕೊಡುವ ಮತ್ತು ಅಧಿಕಾರ ನೀಡುವ ಗಂಭೀರ ಕರ್ತವ್ಯವನ್ನು ಹೊಂದಿವೆ. ಈ ನೆಲೆಯಲ್ಲಿ ಪ್ರಮಾಣೀಕೃತ ದುಭಾಷಿ ಡಾ. ವಿ ಎನ್ ರೇಣುಕಾ ಅವರ ನೆರವಿನೊಂದಿಗೆ ಸಮರ್ಥವಾಗಿ ವಾದ ಮಂಡಿಸಲು ನ್ಯಾಯದಾನದ ದೃಷ್ಟಿಯಿಂದ ಸಾರಾ ಸನ್ನಿ ಅವರಿಗೆ ಅನುಮತಿಸಲಾಗಿತ್ತು. ನ್ಯಾಯಾಲಯದ ಮುಂದೆ ಸಾರಾ ಅವರ ಪ್ರದರ್ಶನವು ಆದರ್ಶನೀಯವಾಗಿದ್ದು, ಸಂಕೇತ ಭಾಷೆಯ ಭಾಷಾಂತರಕಾರ್ತಿಯ ಮೂಲಕ ಮಂಡಿಸಿದ ಆಕೆಯ ವಾದವು ಶುದ್ಧೀಕರಿಸಿದ (ರಿಫೈನ್ಡ್) ವಕೀಲಿಕೆ ಹಾಲ್‌ಮಾರ್ಕ್ ಆಗಿದೆ” ಎಂದು ಹೇಳಿದೆ.
“ಮೌನದ ಗಡಿಗಳನ್ನು ಮೀರಿದ ಸಾರಾ ಸನ್ನಿ ಅವರ ಬಗ್ಗೆ ಆಳವಾದ ಮೆಚ್ಚುಗೆಯನ್ನು ಘನ ನ್ಯಾಯಾಲಯ ವ್ಯಕ್ತಪಡಿಸಿದ್ದು, ಅವರ ಪ್ರಯತ್ನವು ಶಾಶ್ವತ ಸ್ಫೂರ್ತಿಯಾಗಿ ಉಳಿಯಲಿದೆ. ನ್ಯಾಯವು ಶ್ರವಣದ ಮೂಲಕ ಮಾತ್ರವಲ್ಲ, ಹೃದಯ ಮೂಲಕವೂ ಕೇಳುತ್ತದೆ ಎಂಬ ಪ್ರಕಾಶಮಾನವಾದ ಸಂದೇಶ ರವಾನಿಸಿದೆ” ಎಂದು ನ್ಯಾಯಾಲಯ ವ್ಯಾಖ್ಯಾನಿಸಿದೆ.
ಪ್ರಕರಣದ ಹಿನ್ನೆಲೆ: ಅಖಿಲ ಭಾರತ ಪರೀಕ್ ವೈವಾಹಿಕ ಸಮಿತಿಯ ಪೋರ್ಟಲ್ ಮೂಲಕ ಪರಿಚಿತವಾಗಿ ಅಮಿತ್ ಅಶೋಕ್ ವ್ಯಾಸ್ ಮತ್ತು ಸವಿತಾ ಪಾರಿಖ್ 21-05-2023ರಂದು ವಿವಾಹವಾಗಿದ್ದರು. ತೃಪ್ತಿ ಎಂಬ ಮಹಿಳೆಯ ಜೊತೆಗೆ ಅಶ್ಲೀಲ ಚಾಟಿಂಗ್‌ನಲ್ಲಿ ಅಮಿತ್ ನಿರತರಾಗಿದ್ದಾರೆ ಎಂದು ಸವಿತಾ ದೂರಿದ್ದರು. ಈ ವಿಚಾರಕ್ಕೆ ಕಲಹವಾಗಿದ್ದು, 23-05-2023ರಂದು ಸವಿತಾ ಮೇಲೆ ಅಮಿತ್ ಹಲ್ಲೆ ನಡೆಸಿದ್ದರು. ಅದಾಗಲೇ ಸ್ಕಾಟ್ಲೆಂಡ್‌ಗೆ ನಿವಾಸಿಯಾಗಿದ್ದ ಅಮಿತ್ ಅವರು ಅಲ್ಲಿಗೆ ಮರಳಿದ್ದರು.
ಈ ಮಧ್ಯೆ, ಪತ್ನಿ ಸವಿತಾಳು ಅಮಿತ್ ಕುಟುಂಬದವರು ವರದಕ್ಷಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಇದರ ಬೆನ್ನಿಗೇ ವರದಕ್ಷಿಣೆ ಕಿರುಕುಳ, ವಿಚ್ಛೇದನ, ಜೀವನಾಂಶ ಕೋರಿಕೆ ಮತ್ತು ಕೌಟುಂಬಿಕ ದೌರ್ಜನ್ಯ ಕಾಯಿದೆ ಅಡಿ 27-07-2023 ರಿಂದ 01-08-2023ರ ನಡುವೆ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ಈ ಎಲ್ಲಾ ಬೆಳವಣಿಗೆಯ ನಡುವೆ ಅಮಿತ್ ಸ್ಕಾಟ್ಲೆಂಡ್‌ನಲ್ಲಿದ್ದರು. ಇಷ್ಟಾಗಿಯೂ ನ್ಯಾಯಾಲಯದ ಮುಂದೆ ಅಮಿತ್ ಬಾರದಿದ್ದ ಹಿನ್ನೆಲೆಯಲ್ಲಿ ಸ್ಕಾಟ್ಲೆಂಡ್ ರಾಯಭಾರ ಕಚೇರಿಯ ಮೂಲಕ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. 18-02-2024ರಂದು ಸಹೋದರಿಗೆ ವೈದ್ಯಕೀಯ ತುರ್ತಿನ ಹಿನ್ನೆಲೆಯಲ್ಲಿ ಭಾರತಕ್ಕೆ ಅಮಿತ್ ಬರುತ್ತಿದ್ದಂತೆ ಮುಂಬೈನಲ್ಲಿನ ವಲಸೆ ಪ್ರಾಧಿಕಾರದ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು.
ಬೆಂಗಳೂರಿನ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ 18-02-2024ರಂದು ಅವರನ್ನು ಬೆಂಗಳೂರಿಗೆ ಕರೆತರಲಾಗಿತ್ತು. 19-02-2024ರಂದು ಎಲ್‌ಓಸಿ ಜಾರಿಗೊಳಿಸಿರುವ ಮಾಹಿತಿಯನ್ನು ತನ್ನ ಉದ್ಯೋಗದಾತರಿಗೆ ಅಮಿತ್ ನೀಡಿದ್ದರು. ಇದನ್ನು ಪ್ರಶ್ನಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ “ವಿಚಾರಣಾಧೀನ ನ್ಯಾಯಾಲಯಗಳಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ನಡೆಯುತ್ತಿದ್ದರೆ ಅವರ ವಿರುದ್ಧ ಹೊರಡಿಸಿರುವ ಲುಕ್‌ಔಟ್ ಸುತ್ತೋಲೆಯನ್ನು ಹಿಂಪಡೆಯುವುದು ಅಥವಾ ಅಮಾನತು ಮಾಡಬಾರದು. ಈ ವಿಚಾರದಲ್ಲಿ ವಿಚಾರಣಾಧೀನ ನ್ಯಾಯಾಲಯ ಮಧ್ಯಪ್ರವೇಶಿಸುವುದನ್ನು ವ್ಯಾಪ್ತಿಮೀರಿದ ನಡೆ ಎಂದು ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ಆದೇಶಿಸಿದೆ.