Vakeelara Bhavana, AAB 
ಸುದ್ದಿಗಳು

ಮೇಲ್ಮನವಿ ವಿಚಾರಣೆ, ಮೆಮೊ ಸ್ವೀಕಾರದಲ್ಲಿ ವಿಳಂಬ, ಪೀಠಗಳಿಂದ ಸಮಯ ಪಾಲನೆಯಲ್ಲಿ ನಿರ್ಲಕ್ಷ್ಯ: ಸಿಜೆಗೆ ಎಎಬಿಯಿಂದ ಮನವಿ

ಪ್ರಕರಣ ಕೈಗೆತ್ತಿಕೊಳ್ಳುವಂತೆ ಕೋರಿ ಸಲ್ಲಿಸಲಾಗುವ ಮೆಮೊ ಪರಿಗಣಿಸಲಾಗುತ್ತಿಲ್ಲ. ಈ ಸಂಬಂಧ ಕಚೇರಿ, ರಿಜಿಸ್ಟ್ರಿ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ. ಎಷ್ಟೋ ಬಾರಿ 7–8 ಸಲ ಮೆಮೊ ಸಲ್ಲಿಸಿದರೂ ಪ್ರಕರಣ ಪಟ್ಟಿ ಮಾಡುತ್ತಿಲ್ಲ ಎಂದು ಆಕ್ಷೇಪ.

Bar & Bench

ರಿಟ್‌ ಮೇಲ್ಮನವಿ ವಿಚಾರಣೆ, ಪ್ರಕರಣಗಳನ್ನು ನಿಗದಿಗೊಳಿಸುವುದು, ಮೆಮೊ ಸ್ವೀಕರಿಸುವಲ್ಲಿ ಆಗುತ್ತಿರುವ ವಿಳಂಬ ಹಾಗೂ ಕೆಲವು ಪೀಠಗಳು ಸಮಯಪಾಲನೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರಿಗೆ ಬೆಂಗಳೂರು ವಕೀಲರ ಸಂಘ ಆಗ್ರಹಿಸಿದೆ.

ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ ಮತ್ತು ಖಜಾಂಚಿ ಎಂ ಟಿ ಹರೀಶ್‌ ಅವರ ಲಿಖಿತ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರಿಗೆ ಇತ್ತೀಚೆಗೆ ಸಲ್ಲಿಸಲಾಗಿದೆ.

ಹೊಸ ರಿಟ್‌ ಮೇಲ್ಮನವಿಗಳು ಮತ್ತು ಹಸಿರು ಪೀಠದಲ್ಲಿ ವಿಚಾರಣೆಗೆ ಬರಬೇಕಾದ ಪ್ರಕರಣಗಳ ಆಲಿಕೆ ನಡೆಯುತ್ತಿಲ್ಲ. ಕೆಲವು ಏಕಸದಸ್ಯ ಪೀಠಗಳು ಮಂದಗತಿಯ ವಿಚಾರಣೆ ಮೂಲಕ ಕೋರ್ಟ್‌ನ ಅಮೂಲ್ಯ ಸಮಯವನ್ನು ಹರಣ ಮಾಡುತ್ತಿವೆ. ಇದರಿಂದ ಕಕ್ಷಿದಾರರಿಗೆ ಸಿಗಬೇಕಾದ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಂತೆ ಕೋರಿ ಸಲ್ಲಿಸಲಾಗುವ ಜ್ಞಾಪನಾ ಪತ್ರಗಳನ್ನು (ಮೆಮೊ) ಪರಿಗಣಿಸಲಾಗುತ್ತಿಲ್ಲ. ಈ ಸಂಬಂಧ ಕಚೇರಿ ಮತ್ತು ರಿಜಿಸ್ಟ್ರಿ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ. ಎಷ್ಟೋ ಬಾರಿ 7–8 ಸಲ ಮೆಮೊ ಸಲ್ಲಿಸಿದರೂ ಪ್ರಕರಣಗಳನ್ನು ಪಟ್ಟಿ ಮಾಡಲಾಗುತ್ತಿಲ್ಲ. ಇದರಿಂದ ವಕೀಲರು ಮತ್ತು ಸಹಾಯಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

ಕೋರ್ಟ್‌ ಹಾಲ್‌ 1 ಸೇರಿದಂತೆ ಕೆಲವು ಪೀಠಗಳಲ್ಲಿ ವಿಚಾರಣೆಗೆ ನಿಗದಿಗೊಳ್ಳುವ ದಿನದ ಪಟ್ಟಿಯಲ್ಲಿನ ಪ್ರಕರಣಗಳು ದಿನದ ಕಲಾಪದ ಅಂತ್ಯಕ್ಕೆ ವಿಚಾರಣೆಗೆ ತಲುಪುವುದೇ ಇಲ್ಲ. ಅಷ್ಟೇ ಅಲ್ಲ, ಆ ರೀತಿ ಪಟ್ಟಿಯಲ್ಲಿ ಉಳಿಯುವ ಪ್ರಕರಣಗಳಿಗೆ ಕೆಲವು ಪೀಠಗಳು ದೀರ್ಘವಾದ ದಿನಾಂಕ ನೀಡುತ್ತಿರುವುದು ಆಘಾತಕಾರಿ ಎಂದು ಪತ್ರದಲ್ಲಿ ದೂರಲಾಗಿದೆ.

ಹೈಕೋರ್ಟ್‌ ಕಲಾಪ ನಿರ್ವಹಿಸುವ ದಿನಗಳಲ್ಲಿ ಬೆಳಿಗ್ಗೆ 10.30ಕ್ಕೆ ಕಲಾಪ ಆರಂಭವಾಗಬೇಕು. ಆದರೆ, ಕೆಲವು ಪೀಠಗಳು ತಡವಾಗಿ ಆರಂಭವಾಗುತ್ತಿವೆ. ಇಂತಹ ಪೀಠಗಳಲ್ಲಿನ ನ್ಯಾಯಮೂರ್ತಿಗಳ ಬಗ್ಗೆ ತಾವು ಗಮನಹರಿಸಬೇಕು ಎಂದು ಮನವಿ ಮಾಡಲಾಗಿದೆ.

ಇದರಿಂದ ಸಮಸ್ತ ವಕೀಲ ವೃಂದವು ಸಾಕಷ್ಟು ಶೋಷಣೆಗೆ ಒಳಗಾಗಿದೆ. ಇಂತಹ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸುವ ಬಗ್ಗೆ ತಾವು ಗಮನ ಹರಿಸಬೇಕು. ತ್ವರಿತ ಮತ್ತು ಚುರುಕು ಕಾರ್ಯನಿರ್ವಹಣೆ ಎಲ್ಲಿ ಅಗತ್ಯವಿದೆಯೊ ಅದು ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಎಎಬಿ ಒತ್ತಾಯಿಸಿದೆ.