Jayadeva Institute of Cardiovascular Sciences and Research 
ಸುದ್ದಿಗಳು

ಜಯದೇವ ಹೃದ್ರೋಗ ಸಂಸ್ಥೆಗೆ ಅದರ ಹೃದಯವೇ ಸರಿಯಾದ ಸ್ಥಳದಲ್ಲಿ ಇಲ್ಲ: ಕುಟುಕಿದ ಹೈಕೋರ್ಟ್‌

ಅರ್ಜಿದಾರರು 2004 ರಿಂದ 2007ರ ನಡುವಿನ ಅವಧಿಯಲ್ಲಿ ಗುತ್ತಿಗೆ ಆಧಾರದಡಿ ನೇಮಕಗೊಂಡು ಶುಷ್ರೂಷಕಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ, 10 ವರ್ಷ ಸೇವೆ ಪೂರೈಸಿದ ದಿನದಿಂದ ಅನ್ವಯವಾಗುವಂತೆ ಅವರ ಸೇವೆಯನ್ನು ಕಾಯಂಗೊಳಿಸಬೇಕು ಎಂದ ಪೀಠ.

Bar & Bench

ʼಸಿಬ್ಬಂದಿ ನಡೆಸಿಕೊಳ್ಳುವ ವಿಚಾರದಲ್ಲಿ ಜಯದೇವ ಹೃದ್ರೋಗ ಸಂಸ್ಥೆಗೆ ಅದರ ಹೃದಯವೇ ಸರಿಯಾದ ಸ್ಥಳದಲ್ಲಿ ಇಲ್ಲʼ ಎಂದು ಈಚೆಗೆ ಕುಟುಕಿರುವ ಕರ್ನಾಟಕ ಹೈಕೋರ್ಟ್‌, ಸಂಸ್ಥೆಯಲ್ಲಿ 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿದ್ದ 10ಕ್ಕೂ ಹೆಚ್ಚು ಅರ್ಜಿದಾರ ಶುಷ್ರೂಷಕಿಯರನ್ನು ಕಾಯಂಗೊಳಿಸುವಂತೆ ಆದೇಶಿಸಿದೆ.

ಬೆಂಗಳೂರಿನ ಬಿ ಜೆ ರಾಣಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌ ಎಸ್‌ ಸಂಜಯಗೌಡ ಅವರ ಏಕಸದಸ್ಯ ಪೀಠವು ಸೇವೆ ಕಾಯಂಗೊಳಿಸಲು ಆಗದು ಎಂದು ಸಂಸ್ಥೆಯು ಅರ್ಜಿದಾರರಿಗೆ ನೀಡಿದ್ದ ಹಿಂಬರಹವನ್ನು ರದ್ದುಗೊಳಿಸಿದೆ.

ಅರ್ಜಿದಾರರು 2004 ರಿಂದ 2007ರ ನಡುವಿನ ಅವಧಿಯಲ್ಲಿ ಗುತ್ತಿಗೆ ಆಧಾರದಡಿ ನೇಮಕಗೊಂಡು ಶುಷ್ರೂಷಕಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ, 10 ವರ್ಷ ಸೇವೆ ಪೂರೈಸಿದ ದಿನದಿಂದ ಅನ್ವಯವಾಗುವಂತೆ ಅವರ ಸೇವೆಯನ್ನು ಕಾಯಂಗೊಳಿಸಬೇಕು. ಹತ್ತು ವರ್ಷ ಪರಿಗಣಿಸುವಾಗ ಮಧ್ಯದಲ್ಲಿ ಒಂದೆರಡು ದಿನಗಳ ಬ್ರೇಕಿಂಗ್‌ ಅವಧಿಯನ್ನು ನಿರ್ಲಕ್ಷಿಸಬೇಕು ಎಂದು ಜಯದೇವ ಸಂಸ್ಥೆಗೆ ಪೀಠವು ನಿರ್ದೇಶಿಸಿದೆ.

“ರಾಜ್ಯದ ಅತ್ಯುತ್ತಮ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದೆನಿಸಿರುವ ಜಯದೇವ ಸಂಸ್ಥೆಯು ರಾಜ್ಯಕ್ಕೆ ಮಾದರಿಯಾಗಿ ನಡೆದುಕೊಳ್ಳಬೇಕು. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಅಧ್ಯಕ್ಷರಾಗಿರುವ ಇದರ ಆಡಳಿತ ಮಂಡಳಿಯು ತನ್ನದೇ ಆಸ್ಪತ್ರೆಯ ಶುಷ್ರೂಷಕಿಯರ ವಿಚಾರದಲ್ಲಿ ಅನ್ಯಾಯದಿಂದ ನಡೆದುಕೊಳ್ಳುವುದು ಸರಿಯಲ್ಲ. ಸಿಬ್ಬಂದಿಯ ಅನುಭವವನ್ನು ಕಾನೂನಾತ್ಮಕವಾಗಿ ಪರಿಗಣಿಸಿ ಅವರ ಸೇವೆ ಕಾಯಂ ಬಗ್ಗೆ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು” ಎಂದು ಹೇಳಿದೆ.

ಸೇವೆ ಕಾಯಂಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಜೂನ್‌ 2ರಂದು ನೀಡಿರುವ ಹಿಂಬರಹ ಏಕಪಕ್ಷೀಯ, ಕಾನೂನುಬಾಹಿರವಾಗಿದ್ದು, ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯೂ ಆಗಿದೆ. ಆದ್ದರಿಂದ ಇದನ್ನು ರದ್ದುಗೊಳಿಸಬೇಕು. ನಮ್ಮ ಸೇವೆಯನ್ನು ಕಾಯಂಗೊಳಿಸಲು ಹಾಗೂ ಕಾನೂನುಬದ್ಧವಾಗಿ ಸಲ್ಲಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಜಯದೇವ ಸಂಸ್ಥೆಯು 1960ರ ಕರ್ನಾಟಕ ಸೊಸೈಟಿ ನೋಂದಣಿ ಕಾಯಿದೆ–1960ರ ಅನ್ವಯ ನೋಂದಣಿಯಾಗಿದ್ದು, 1983ರಲ್ಲಿ ಶ್ರೀ ಜಯದೇವ ಹೃದ್ರೋಗ ಶಾಸ್ತ್ರ ಸಂಸ್ಥೆ ನಿಯಮಗಳು ಮತ್ತು ನಿಬಂಧನೆಗಳು–1983 ಅನ್ನು ರೂಪಿಸಲಾಗಿದ್ದು, ಸಿಬ್ಬಂದಿ ನೇಮಕ ಮತ್ತು ಅವರಿಗೆ ಸಂಬಳ, ಇತರ ಭತ್ಯೆಗಳನ್ನು ಸಂಸ್ಥೆಯ ನಿಯಮ–ನಿಬಂಧನೆಗಳು ಮತ್ತು ಬೈ–ಲಾಗೆ ಅನುಗುಣವಾಗಿ ಪಾವತಿಸುವ ಅಧಿಕಾರ ಹೊಂದಿದೆ.

B J Rani & Others Vs State of Karnataka.pdf
Preview