ಸುದ್ದಿಗಳು

ಮೃತ ಹೆಣ್ಣುಮಗಳ ಕಾನೂನಾತ್ಮಕ ಉತ್ತರಾಧಿಕಾರಿಗಳಿಗೂ ಆಸ್ತಿಯಲ್ಲಿ ಸಮಾನ ಹಕ್ಕಿದೆ: ಹೈಕೋರ್ಟ್

ವ್ಯಕ್ತಿ ಹುಟ್ಟಿನಿಂದಲೇ ಹಕ್ಕು ಹೊಂದಿರುತ್ತಾನೆಯೇ ಹೊರತು ಉತ್ತರಾಧಿಕಾರದಿಂದಲ್ಲ. ಅದರಂತೆ ಮಗಳು ಜೀವಂತ ಇರಲಿ ಅಥವಾ ಇಲ್ಲದಿರಲಿ ಆಕೆ ಆಸ್ತಿಯಲ್ಲಿ ಹಕ್ಕು ಪಡೆದಿರುತ್ತಾಳೆ ಎಂದು ನುಡಿದಿದೆ ಪೀಠ.

Bar & Bench

ಹಿಂದೂ ಉತ್ತರಾಧಿಕಾರ ಕಾಯಿದೆಗೆ ತಿದ್ದುಪಡಿ ಮಾಡುವ ಮುನ್ನವೇ ಮಗಳು ಮೃತಪಟ್ಟಿದ್ದಾರೆಂಬ ಕಾರಣದಿಂದ ಆಕೆಯ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ನಿರಾಕರಿಸಲಾಗದು. ಪುತ್ರಿ ಮೃತಪಟ್ಟಿದ್ದರೂ ಆಕೆಯ ಕಾನೂನಾತ್ಮಕ ವಾರಸುದಾರರಿಗೆ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್‌ ಧಾರವಾಡ ಪೀಠ ಈಚೆಗೆ ತೀರ್ಪು ನೀಡಿದೆ.

''ಹೆಣ್ಣು ಮಕ್ಕಳಿಗೆ ಜಂಟಿ ಉತ್ತರಾಧಿಕಾರದ (ಕೊಪಾರ್ಸೆನರಿ) ಹಕ್ಕುಗಳನ್ನು ನೀಡುವ ಉದ್ದೇಶದಿಂದ 2005ರ ಸೆ. 9ರಂದು ಕಾಯಿದೆಗೆ  ತಿದ್ದುಪಡಿ ಮಾಡಲಾಯಿತು. ಆದರೆ ಆ ದಿನಕ್ಕೂ ಮೊದಲೇ ಮಹಿಳೆ ಮೃತಪಟ್ಟಿದ್ದಾರೆಂದು ಹೇಳಿ ಪೂರ್ವಜರ ಆಸ್ತಿ ಹಕ್ಕುಗಳನ್ನು ಆಕೆಯ ಕಾನೂನಾತ್ಮಕ ವಾರಸುದಾರರಿಂದ ಕಸಿದುಕೊಳ್ಳುವಂತಿಲ್ಲ'' ಎಂದು ನ್ಯಾ. ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

ಮೃತ ಹೆಣ್ಣು ಮಕ್ಕಳ ಕಾನೂನು ಉತ್ತರಾಧಿಕಾರಿಗಳು ಕೂಡ ಆಸ್ತಿಯಲ್ಲಿಸಮಾನ ಪಾಲು ಪಡೆಯಬಹುದು ಎಂದು ಪೀಠದ ಆದೇಶ ಹೇಳಿದೆ.  

ವಿನೀತಾ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ವಿಸ್ತೃತ ಪೀಠ 2020ರಲ್ಲಿ ಸ್ಪಷ್ಟ ತೀರ್ಪು ನೀಡಿದೆ. 2005ರ ಹಿಂದೂ ಉತ್ತರಾಧಿಕಾರ ಕಾಯಿದೆಗೆ ಮಾಡಲಾದ ತಿದ್ದುಪಡಿಯಂತೆ ಹೆಣ್ಣು ಮಕ್ಕಳು ಗಂಡು ಮಕ್ಕಳಂತೆಯೇ 'ಜಂಟಿ ಉತ್ತರಾಧಿಕಾರದ' ಹಕ್ಕುಗಳನ್ನು ಪಡೆಯುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.

“ವ್ಯಕ್ತಿ ಹುಟ್ಟಿನಿಂದಲೇ ಹಕ್ಕು ಪಡೆದಿರುತ್ತಾನೆಯೇ ವಿನಾ ಉತ್ತರಾಧಿಕಾರದಿಂದಲ್ಲ. ಅದರಂತೆ ಮಗಳು ಜೀವಂತ ಇರಲಿ ಅಥವಾ ಇಲ್ಲದಿರಲಿ ಅವಳು ಆಸ್ತಿಯಲ್ಲಿ ಹಕ್ಕು ಪಡೆದಿರುತ್ತಾಳೆ. ಕಾಯಿದೆಗೆ 2005ರಲ್ಲಿ ತಿದ್ದುಪಡಿ ನಡೆಯುವ ಮೊದಲೇ ಆಕೆ ನಿಧನರಾಗಿದ್ದಾರೆಂದು ನೆಪ ಹೇಳಿ ಆಕೆಯ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕನ್ನುನಿರಾಕರಿಸಲಾಗದು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ” ಎಂಬುದಾಗಿ ಪೀಠ ವಿವರಿಸಿದೆ.

ತಿದ್ದುಪಡಿ ಕಾಯಿದೆ ಲಿಂಗ ಸಮಾನತೆ ನೀಡಲಿದೆ. ಅದೇ ರೀತಿ ತಿದ್ದುಪಡಿ ನಿಯಮಗಳು ಪೂರ್ವಾನ್ವಯವಾಗುತ್ತವೆ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಹೇಳಿರುವುದಾಗಿ ಹೈಕೋರ್ಟ್‌ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ನರಗುಂದದ ಚನ್ನಬಸಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಡಿಸೆಂಬರ್‌ 18ರಂದು ಪೀಠ ವಜಾಗೊಳಿಸಿತು. ಆದೇಶದ ಪ್ರತಿ ಈಚೆಗೆ ಲಭಿಸಿತ್ತು.