ಹೇಮಂತ್ ಸೊರೆನ್ ಮತ್ತು ಸುಪ್ರೀಂ ಕೋರ್ಟ್
ಹೇಮಂತ್ ಸೊರೆನ್ ಮತ್ತು ಸುಪ್ರೀಂ ಕೋರ್ಟ್ 
ಸುದ್ದಿಗಳು

ಇ ಡಿ ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹೇಮಂತ್ ಸೊರೇನ್‌: ನಾಳೆ ವಿಚಾರಣೆ

Bar & Bench

ಭೂ ಹಗರಣದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಜಾರ್ಖಂಡ್ ನಿಕಟಪೂರ್ವ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಮಂತ್ ಸೊರೆನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಗುರುವಾರ ಬೆಳಿಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದೆದುರು ಪ್ರಕರಣ ಪ್ರಸ್ತಾಪಿಸಿದರು.

"ಇದು ದೇಶದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ಮನುಷ್ಯನನ್ನು ಈ ರೀತಿ ಬಂಧಿಸಲು ಸಾಧ್ಯವೇ?" ಎಂದು ಸಿಬಲ್ ವಾದಿಸಿದರು.

ನಾಳೆ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಆಗ ಸಿಜೆಐ ಚಂದ್ರಚೂಡ್ ಹೇಳಿದರು.

ಈ ಮಧ್ಯೆ ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸೊರೇನ್‌ ಅವರ ಬಂಧನವನ್ನು ಜಾರ್ಖಂಡ್ ಹೈಕೋರ್ಟ್‌ನಲ್ಲಿ ನಿನ್ನೆ ಪ್ರಶ್ನಿಸಲಾಗಿದ್ದು ಈಗ ಸುಪ್ರೀಂ ಕೋರ್ಟ್‌ ಮುಂದೆ ಅರ್ಜಿ ಪ್ರಸ್ತಾಪಿಸಿರುವುದು ಹೈಕೋರ್ಟ್‌ ನಿಟ್ಟಿನಿಂದ ನ್ಯಾಯಯುತವಾಗಿರುವುದಿಲ್ಲ ಎಂದು ಗಮನಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದರು.

"ನಾವು ಅದನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ. ಕಳೆದ ರಾತ್ರಿ ಅದನ್ನು ಆಲಿಸಬೇಕೆಂದು ನಾವು ಬಯಸಿದ್ದೆವು. ದಯವಿಟ್ಟು, ಈ ನ್ಯಾಯಾಲಯ (ಸುಪ್ರೀಂ ಕೋರ್ಟ್) ಅದನ್ನು ನಿರ್ಧರಿಸಲಿ. ನಾವು (ಹೈಕೋರ್ಟ್‌ನಲ್ಲಿರುವ) ಪ್ರಕರಣ ಹಿಂಪಡೆಯುತ್ತೇವೆ ಎಂದು ಭಾಷೆ ಕೊಡುವೆ... ಇದು ಬಹಳ ಗಂಭೀರವಾದ ವಿಷಯ.. (ಲೋಕಸಭಾ) ಚುನಾವಣೆಗೂ ಮುನ್ನ ಎಲ್ಲರನ್ನೂ ಜೈಲಿಗೆ ಹಾಕಲಾಗುತ್ತದೆ" ಎಂದು ಸಿಬಲ್ ವಾದಿಸಿದರು.

ಆರೋಪಗಳು ಕೂಡ ಗಂಭೀರವಾಗಿವೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಈ ವೇಳೆ ಹೇಳಿದರು. ಆಗ ಎಸ್‌ ಜಿ ಮೆಹ್ತಾ "ಪ್ರತಿ ದಿನ ನೂರಾರು ಮಂದಿಯ ಬಂಧನವಾಗುತ್ತಿರುತ್ತದೆ" ಎಂದರು.

"ನಿಮ್ಮ ಎಲ್ಲಾ ಶಸ್ತ್ರಾಸ್ತ್ರಗಳನ್ನು ನಾಳೆಗೆ ಇರಿಸಿಕೊಳ್ಳಿ " ಎಂದು ನುಡಿದ ಸಿಜೆಐ ಶುಕ್ರವಾರ ಪ್ರಕರಣವನ್ನು ವಿಚಾರಣೆಗೆ ನಾಳೆ ಪಟ್ಟಿ ಮಾಡುವಂತೆ ಸೂಚಿಸಿದರು.

ಭೂ ಹಗರಣ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹೇಮಂತ್‌ ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಅವರು ಕಳೆದ ರಾತ್ರಿ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಹೇಮಂತ್ ಸೊರೆನ್ ಅವರ ಅನುಪಸ್ಥಿತಿಯಲ್ಲಿ ಚಂಪೈ ಸೊರೆನ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.