Hemant Soren and Supreme Court  
ಸುದ್ದಿಗಳು

ಹೇಮಂತ್ ಸೋರೆನ್ ಜೈಲಿನಲ್ಲಿರುವಂತೆಯೇ ಚುನಾವಣೆ ಮುಗಿದಿರುತ್ತದೆ: ಸುಪ್ರೀಂ ಕೋರ್ಟ್‌ನಲ್ಲಿ ಕಪಿಲ್ ಸಿಬಲ್‌ ಬೇಸರ

ಹೈಕೋರ್ಟ್ ಫೆಬ್ರವರಿ 27 ಮತ್ತು 28ರಂದು ಸೊರೆನ್ ಅವರ ಮನವಿಯ ವಿಚಾರಣೆ ನಡೆಸಿತಾದರೂ ಇನ್ನೂ ಈ ಕುರಿತು ಆದೇಶ ಮಾಡಿಲ್ಲ ಎಂದು ಸಿಬಲ್ ಹೇಳಿದರು.

Bar & Bench

ಭೂ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೆನ್ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಬಂಧನ ಪ್ರಶ್ನಿಸಿ ತಾನು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಆದೇಶ ನೀಡಲು ಜಾರ್ಖಂಡ್‌ ಹೈಕೋರ್ಟ್‌ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಅರ್ಜಿಯಲ್ಲಿ ಸೊರೇನ್‌ ದೂರಿದ್ದಾರೆ.

ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರೆದುರು ಸೊರೇನ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಫೆಬ್ರವರಿ 27 ಮತ್ತು 28ರಂದು ಸೊರೆನ್ ಅವರ ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತಾದರೂ ಇನ್ನೂ ಆದೇಶ ಮಾಡಿಲ್ಲ ಎಂದರು.

ಆದೇಶ ಪ್ರಕಟಣೆ ವಿಳಂಬವಾದರೆ ಲೋಕಸಭೆ ಚುನಾವಣೆ ನಡೆಯುವಾಗ ಸೋರೆನ್ ಜೈಲಿನಲ್ಲೇ ಉಳಿದಿರುತ್ತಾರೆ. ನಾವು ಏನಾದರೂ ಹೆಚ್ಚು ಹೇಳಿದರೆ ಅದು ನ್ಯಾಯಾಂಗದ ಮೇಲೆ ದಾಳಿ ಮಾಡಿದಂತಾಗುತ್ತದೆ ಎಂದು ಅವರು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಖನ್ನಾ ಅವರು, ಪ್ರಕರಣವನ್ನು ಪಟ್ಟಿ ಮಾಡುವ ಕುರಿತಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳೇ ನಿರ್ಧಾರ ಕೈಗೊಳ್ಳಬೇಕು ಎಂದರು.

 ಇದು ತುಂಬಾ ದುಃಖಕರ ಸಂಗತಿ ಎಂದು ಸಿಬಲ್‌ ಪ್ರತಿಕ್ರಿಯಿಸಿದರು. ಆಗ‌ ನ್ಯಾ. ಖನ್ನಾ “ನೀವು (ಈಗಲೇ ) ಆದೇಶ ಉಚ್ಚರಿಸುತ್ತಿದ್ದೀರಿ" ಎಂದು ಖಾರವಾಗಿ ನುಡಿದರು.

ಭೂ ಹಗರಣದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೊರೇನ್‌ ಅವರನ್ನು ಬಂಧಿಸಿತ್ತು. ಇದರಿಂದಾಗಿ ಜನವರಿ 31 ರಂದು ಸೋರೆನ್ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಜಾರಿ ನಿರ್ದೇಶನಾಲಯವು ಸೋರೆನ್, ರಂಜನ್ ಹಾಗೂ ಉಳಿದ ಒಂಬತ್ತು ಮಂದಿ ಮತ್ತು ಮೂರು ಕಂಪನಿಗಳ ವಿರುದ್ಧ ಪಿಎಂಎಲ್‌ಎ ಸೆಕ್ಷನ್ 45 ರ ಅಡಿ ಇ ಡಿ ಜೂನ್ 23, 2016ರಂದು ದೂರು ದಾಖಲಿಸಿತ್ತು.

ತಮ್ಮ ಬಂಧನ ಪ್ರಶ್ನಿಸಿ ಅವರು ಸಂವಿಧಾನದ  32ನೇ ವಿಧಿಯಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಾದರೂ ಅದು ಮನವಿಯನ್ನು ಪುರಸ್ಕರಿಸಿರಲಿಲ್ಲ. ಬದಲಿಗೆ ಹೈಕೋರ್ಟ್‌ಗೆ ಮನವಿ ಸಲ್ಲಿಸುವಂತೆ ಸೂಚಿಸಿತ್ತು. 

ಹೇಮಂತ್‌ ಅವರು ನಂತರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ಹೈಕೋರ್ಟ್ ಆಲಿಸಿದೆಯಾದರೂ ಇನ್ನೂ ತನ್ನ ಆದೇಶ ಪ್ರಕಟಿಸಿಲ್ಲ.