ಸುದ್ದಿಗಳು

ಸಿಬಿಎಸ್‌ಇ ಪಠ್ಯ ಕ್ರಮದಲ್ಲಿ 10ನೇ ತರಗತಿ ಪರೀಕ್ಷೆ ಬರೆಯಲು ಕೋರಿಕೆ: 18 ವಿದ್ಯಾರ್ಥಿಗಳಿಗೆ ಸಮ್ಮತಿಸಿದ ಹೈಕೋರ್ಟ್‌

18 ವಿದ್ಯಾರ್ಥಿಗಳು ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಜನನಿ ಪಬ್ಲಿಕ್ ಶಾಲೆ ಸಿಬಿಎಸ್‌ಇಗೆ ಮನವಿ ಮಾಡಿತ್ತು. ಸಿಬಿಎಸ್‌ಇ ಇದನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಶಾಲೆ ಹೈಕೋರ್ಟ್ ಮೆಟ್ಟಿಲೇರಿತ್ತು.

Bar & Bench

ಬೆಂಗಳೂರಿನ ಕಾಡುಗೋಡಿ ಜನನಿ ಪಬ್ಲಿಕ್ ಶಾಲೆಯ 18 ವಿದ್ಯಾರ್ಥಿಗಳಿಗೆ 2024-25ನೇ ಸಾಲಿನಲ್ಲಿ ಸಿಬಿಎಸ್‌ಇ ಪಠ್ಯಕ್ರಮದಲ್ಲಿ 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿರುವ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಮಧ್ಯಂತರ ಆದೇಶವನ್ನು ವಿಭಾಗೀಯ ಪೀಠ ಎತ್ತಿಹಿಡಿದಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸಿಬಿಎಸ್‌ಇ ಪ್ರತಿನಿಧಿಸಿದ್ದ ವಕೀಲ ಮಧುಕರ್‌ ದೇಶಪಾಂಡೆ ಅವರು “ಜನನಿ ಶಾಲೆಯ 18 ವಿದ್ಯಾರ್ಥಿಗಳು 9ನೇ ತರಗತಿಯವರೆಗೂ ರಾಜ್ಯ ಮಂಡಳಿ ಪಠ್ಯಕ್ರಮದಲ್ಲಿ ಅಧ್ಯಯನ ನಡೆಸಿದ್ದಾರೆ. ಈಗ 10ನೇ ತರಗತಿಗೆ ಸಿಬಿಎಸ್‌ಸಿ ಪರೀಕ್ಷೆಗೆ ಹಾಜರಾಗುವುದಕ್ಕೆ ಅವಕಾಶವಿಲ್ಲ. ಶಾಲೆ 2026ನೇ ಸಾಲಿನಿಂದ ಸಿಬಿಎಸ್‌ಇಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಮಾತ್ರ ಸಿಬಿಎಸ್‌ಇ ಪರೀಕ್ಷೆಗಳಿಗೆ ಹಾಜರಾಗುವುದಕ್ಕೆ ಅವಕಾಶವಿರಲಿದೆ. ಏಕಸದಸ್ಯ ಪೀಠದ ಆದೇಶದಿಂದ ವಿದ್ಯಾರ್ಥಿಗಳು ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಅಧ್ಯಯನ ಮಾಡದಿದ್ದರೂ ಪರೀಕ್ಷೆಗೆ ಅವಕಾಶ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ” ಎಂದರು.

ಜನನಿ ಶಾಲೆಯ ಪರ ವಕೀಲರು “ಶಾಲೆಗೆ ಸ್ವಿಚ್ ಓವರ್ ವಿಭಾಗದಲ್ಲಿ ಮಾನ್ಯತೆಯಿದೆ. ಶಾಲೆಯಲ್ಲಿ 18 ಮಂದಿ ಸಿಬಿಎಸ್‌ಇ ಪಠ್ಯಕ್ರಮ ಆರಿಸಿಕೊಂಡಿದ್ದಾರೆ, ಅವರಿಗೆ ಈಗಾಗಲೇ ಪೂರ್ವ ಸಿದ್ದತಾ ಪರೀಕ್ಷೆಗಳನ್ನು ಮಾಡಲಾಗಿದೆ. ಯಾವುದೇ ಹೊಸ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಲ್ಲ. ಈ ವಿದ್ಯಾರ್ಥಿಗಳಿಗೆ ರಾಜ್ಯ ಮಂಡಳಿ ಪಠ್ಯಕ್ರಮದ ಪರೀಕ್ಷೆಗೆ ಹಾಜರಾಗುವುದಕ್ಕೆ ಅವಕಾವಿಲ್ಲ. ಆದರೆ, ಸಿಬಿಎಸ್‌ಇ ನಿಯಮಗಳ ಪ್ರಕಾರ 10ನೇ ತರಗತಿಗೆ ನೇರ ಪ್ರವೇಶಕ್ಕೆ ಅವಕಾಶವಿದೆ” ಎಂದು ವಾದಿಸಿದರು.

18 ವಿದ್ಯಾರ್ಥಿಗಳು ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಜನನಿ ಪಬ್ಲಿಕ್ ಶಾಲೆ ಸಿಬಿಎಸ್‌ಇಗೆ ಮನವಿ ಮಾಡಿತ್ತು. ಸಿಬಿಎಸ್‌ಇ ಇದನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಶಾಲೆ ಹೈಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು 2025ರ ಫೆಬ್ರುವರಿ 15ರಿಂದ ನಡೆಯಲಿರುವ 2024–25ನೇ ಸಾಲಿನ 10ನೇ ತರಗತಿ ಪರೀಕ್ಷೆಗೆ 18 ವಿದ್ಯಾರ್ಥಿಗಳಿಗೆ ಅವಕಾಶ ನೀಡುವಂತೆ ಜನವರಿ 27ರಂದು ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸಿಬಿಎಸ್‌ಇ ಮೇಲ್ಮನವಿ ಸಲ್ಲಿಸಿತ್ತು.