ರಸ್ತೆ ಒತ್ತುವರಿ ಹಾಗೂ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಸರ್ವೆ ನಡೆಸಿ ವರದಿ ಸಲ್ಲಿಸದ ಕಾರಣ ಜಾಮೀನುಸಹಿತ ವಾರಂಟ್ ಜಾರಿಗೊಳಿಸಿದ್ದರೂ ನ್ಯಾಯಾಲಯಕ್ಕೆ ಹಾಜರಾಗದ ಮೈಸೂರು ಪಾಲಿಕೆ ಆಯುಕ್ತ ಹಾಗೂ ವಲಯ ಆಯುಕ್ತರನ್ನು ಬಂಧಿಸಲು ಪೊಲೀಸರಿಗೆ ಆದೇಶಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಎಚ್ಚರಿಕೆ ನೀಡಿದೆ.
ಮಾಜಿ ಪಾಲಿಕೆ ಸದಸ್ಯ ಪಿ.ಶ್ರೀಕಂಠಮೂರ್ತಿ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರು ಮತ್ತು ವಲಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಒತ್ತುವರಿ ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ 2021ರ ಜೂನ್ 25ರಂದು ನ್ಯಾಯಾಲಯ ಆದೇಶಿಸಿತ್ತು. ಇದಾದ ಬಳಿಕ ಆಯುಕ್ತರು ಮತ್ತು ವಲಯ ಆಯುಕ್ತರ ಪರ ವಕೀಲರು ಮೂರ್ನಾಲ್ಕು ಬಾರಿ ಕಾಲಾವಕಾಶ ಪಡೆದುಕೊಂಡಿದ್ದರು. ಅನೇಕ ಬಾರಿ ಕಾಲಾವಕಾಶ ಪಡೆದು ವರದಿಯೂ ಸಲ್ಲಿಸದೇ ಇರುವ ಮತ್ತು ಕೋರ್ಟ್ ವಿಚಾರಣೆಗೂ ಹಾಜರಾಗದ ಆಯುಕ್ತರು ಹಾಗೂ ವಲಯ-7ರ ವಲಯ ಆಯುಕ್ತರ ವಿರುದ್ಧ ತಲಾ 25 ಸಾವಿರ ರೂಪಾಯಿ ಮೊತ್ತದ ಜಾಮೀನು ಸಹಿತ ವಾರಂಟ್ ಹೊರಡಿಸಿ ಅಕ್ಟೋಬರ್ 26ರಂದು ಖುದ್ದು ಹಾಜರಾಗುವಂತೆ ಪೀಠ ಅಕ್ಟೋಬರ್ 4ರಂದು ಆದೇಶಿಸಿತ್ತು.
ಬುಧವಾರ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಮೈಸೂರು ಪಾಲಿಕೆ ಪರ ವಕೀಲರು ಹಾಜರಾಗಿ ಆಯುಕ್ತರು ಹಾಗೂ ವಲಯ ಆಯುಕ್ತರ ಗೈರಾಗಿರುವುದಕ್ಕೆ ಕ್ಷಮೆ ಕೋರಿದರು. ಅಲ್ಲದೆ, ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಅದನ್ನು ಪುರಸ್ಕರಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಪೀಠವು ನಿರ್ದೇಶನ ನೀಡಿದ ಹೊರತಾಗಿಯೂ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಾಗಲಿಲ್ಲ. ಮತ್ತೊಂದೆಡೆ ಪೀಠದ ಆದೇಶವನ್ನು ಪಾಲಿಸಿಲ್ಲ. ಸರ್ಕಾರಿ ಅಧಿಕಾರಿಗಳು ನಡೆದುಕೊಳ್ಳುವ ರೀತಿ ಇದೇನಾ? ಅದರಲ್ಲೂ ಜಾಮೀನುಸಹಿತ ವಾರಂಟ್ ಜಾರಿಗೊಳಿಸಿದ್ದು, ಅದರ ಅರಿವು ಇದ್ದರೂ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಎಂದರೆ ಹೇಗೆ? ಸರ್ಕಾರಿ ಅಧಿಕಾರಿಗಳ ಇಂತಹ ನಡವಳಿಕೆ ನ್ಯಾಯಾಲಯ ಸಹಿಸುವುದಿಲ್ಲ” ಎಂದಿತು.
“ನ್ಯಾಯಾಲಯದ ಆದೇಶಗಳಿಗೆ ಬೆಲೆ ಹಾಗೂ ಗೌರವ ಇಲ್ಲವೇ? ಆದೇಶ ಪಾಲನೆ ಮಾಡದಿದ್ದರೆ ಅಧಿಕಾರಿಗಳಿಂದ ಆದೇಶವನ್ನು ಪಾಲನೆ ಮಾಡಿಸುವುದು ಹೇಗೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದ್ದರೂ ಅಧಿಕಾರಿಗಳು ಬರಲಿಲ್ಲ. ಹಾಗಾಗಿ, ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದರೆ ಸರಿ ಹೋಗುತ್ತದೆ” ಎಂದು ಪೀಠ ಖಾರವಾಗಿ ಹೇಳಿತು.
ಪಾಲಿಕೆ ಪರ ವಕೀಲರು “ಪ್ರಕರಣದ ವಿಚಾರಣೆ ನಿಗದಿಯಾಗಿರುವ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಇದರಿಂದ ಅಧಿಕಾರಿಗಳು ಹಾಜರಾಗಲಿಲ್ಲ. ನ್ಯಾಯಾಲಯ ಒಂದು ಅವಕಾಶ ನೀಡಿದರೆ ತಪ್ಪದೇ ಮೈಸೂರು ಪಾಲಿಕೆ ಆಯುಕ್ತರು ಹಾಗೂ ವಲಯ ಆಯುಕ್ತರು ಕೋರ್ಟ್‌ಗೆ ಹಾಜರಾಗುವವರು” ಎಂದರು.
ಇದರಿಂದ ಕಠಿಣ ಆದೇಶ ಹೊರಡಿಸುವುದರಿಂದ ಹಿಂದೆ ಸರಿದ ಪೀಠವು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿತು. ಅಂದು ಈ ಇಬ್ಬರು ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತು.