ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಪೊಲೀಸ್ ಕ್ವಾರ್ಟರ್ಸ್‌ನ್ನು ಖಾಸಗಿಯವರಿಗೆ ಮಾರಾಟ ಮಾಡಿರುವುದಕ್ಕೆ ಗುರುವಾರ ಆಘಾತ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, “ಇದಕ್ಕೆ ಅವಕಾಶ ಮಾಡಿಕೊಟ್ಟರೆ ಹೈಕೋರ್ಟ್ ಕಟ್ಟಡವೂ ಸುರಕ್ಷಿತವಾಗಿರುವುದಿಲ್ಲ” ಎಂದು ಮೌಖಿಕವಾಗಿ ಹೇಳಿದೆ.
ಶಿವಮೊಗ್ಗದ ಶ್ರೀನಾಥ್ ನಗರಗದ್ದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ಮೊದಲನೇ ಆರೋಪಿ ಎಂ ಆರ್ ಮಹಾಲಕ್ಷ್ಮಿ ಅವರಿಗೆ ಪೊಲೀಸ್ ಕ್ವಾರ್ಟರ್ಸ್ ಇರುವ ಜಾಗ ಸೇರಿದೆ. ಇದು ತನ್ನ ಆಸ್ತಿ ಎಂದು ಅವರು ಮಾರಾಟ ಮಾಡಿದ್ದು, ಅವರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಲಾಗಿದೆ. ಇದು ಮಹಾಲಕ್ಷ್ಮಿ ಅವರಿಗೆ ಸೇರಿದ ಜಾಗ ಎಂಬುದಕ್ಕೆ ಪೂರಕವಾಗಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲಾಗಿದೆ. ಎನ್ಕಂಬರೆನ್ಸ್ ಸರ್ಟಿಫಿಕೇಟ್ವೂ (ಋಣಭಾರ ಪ್ರಮಾಣಪತ್ರ) ಆರೋಪಿ ಹೆಸರಿನಲ್ಲಿದೆ. ಆಕ್ಷೇಪಾರ್ಹವಾದ ಜಾಗವು ಪೊಲೀಸ್ ಇಲಾಖೆಗೆ ಸೇರಿದ್ದು ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಯನ್ನು ಪ್ರಾಸಿಕ್ಯೂಷನ್ ಹಾಜರುಪಡಿಸಿಲ್ಲ” ಎಂದರು.
ಆಗ ಪೀಠವು “ಇದಕ್ಕಾಗಿಯೇ ನಾನು ಹೇಳಿದ್ದು, ಇದಕ್ಕೆ ಅವಕಾಶ ನೀಡಿದರೆ ಈ (ಹೈಕೋರ್ಟ್) ಕಟ್ಟಡವೂ ಸುರಕ್ಷಿತವಾಗಿರುವುದಿಲ್ಲ” ಎಂದಿದ್ದಲ್ಲದೇ, ಪೊಲೀಸರೇ ಒತ್ತುವರಿದಾರರೇ?” ಎಂದು ಪ್ರಶ್ನಿಸಿತು.
ಇದಕ್ಕೆ ಅರುಣ್ ಶ್ಯಾಮ್ ಅವರು “ಈ ವಿವಾದಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್‌ನಲ್ಲಿ ಎರಡು ದಾವೆಗಳು ದಾಖಲಾಗಿದ್ದು, ಒಂದರಲ್ಲಿ ಪೊಲೀಸರು ಪಕ್ಷಕಾರರಾಗಿದ್ದಾರೆ. ಜಾಗಕ್ಕೆ ಸಂಬಂಧಿಸಿದಂತೆ ಸರ್ಕಾರವು ಒಂದೇ ಒಂದು ದಾಖಲೆ ಹಾಜರುಪಡಿಸಿದರೂ ಅರ್ಜಿ ಹಿಂಪಡೆಯಲಾಗುವುದು” ಎಂದರು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಆಕ್ಷೇಪಾರ್ಹವಾದ ಜಾಗವು 1930ರಿಂದಲೂ ಪೊಲೀಸ್ ಇಲಾಖೆಗೆ ಸೇರಿದೆ” ಎಂದರು.
ಈ ಹಂತದಲ್ಲಿ ಪೀಠವು “ನಿಮ್ಮ ಧೈರ್ಯವನ್ನು ಮೆಚ್ಚಬೇಕು. ಪೊಲೀಸ್ ಕ್ವಾರ್ಟರ್ಸ್ ಅನ್ನು ನೀವು ಮಾರಾಟ ಮಾಡಿದ್ದೀರಿ. ಕಳೆದ 15 ವರ್ಷಗಳಿಂದ ಪೊಲೀಸ್ ಕ್ವಾರ್ಟರ್ಸ್ ಇರುವ ಪೊಲೀಸರು ನೆಲೆಸಿರುವ ಜಾಗವನ್ನು ನೀವು ಮಾರಾಟ ಮಾಡಿದ್ದೀರಿ” ಎಂದಿತು.
ಆಗ ಅರುಣ್ ಶ್ಯಾಮ್ ಅವರು “ಅಗ್ರಿಮೆಂಟ್ ಮಾಡಿಸಿಕೊಂಡಿರುವವರನ್ನು ಪ್ರತ್ಯೇಕಿಸಿ ಪ್ರಕರಣ ದಾಖಲಿಸಲಾಗಿದೆ. ಮಾಲೀಕರು ಎಂದು ಹೇಳಿಕೊಂಡಿರುವವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ” ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಜೂನ್ 9ಕ್ಕೆ ನಡೆಸುವುದಾಗಿ ತಿಳಿಸಿತು.