ತಮ್ಮ ವಿರುದ್ಧದ ವೈಯಕ್ತಿಕ ದ್ವೇಷ ಮತ್ತು ಪ್ರತೀಕಾರದಿಂದಾಗಿ ತಮ್ಮನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ಪದಚ್ಯುತಗೊಳಿಸುವಂತೆ ಮಹಾರಾಷ್ಟ್ರದ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ರಾಜೇಂದ್ರಕುಮಾರ್ ತ್ರಿವೇದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸಿಬಿಐ ನಿರ್ದೇಶಕ ಸುಬೋಧ್ ಜೈಸ್ವಾಲ್ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಪ್ರಕರಣದಲ್ಲಿ ಹೈಕೋರ್ಟ್‌ನ ವಿಶೇಷ ನ್ಯಾಯವ್ಯಾಪ್ತಿ ಅನ್ವಯಿಸಲು ಯಾವುದೇ ವಾದ ಮಂಡಿಸಿಲ್ಲ. ಕೇವಲ ಸೇಡು, ಪ್ರತಿಕಾರ ಹಾಗೂ ವೈಯಕ್ತಿಕ ದ್ವೇಷದಿಂದ ಪ್ರಸ್ತುತ ಅರ್ಜಿ ಸಲ್ಲಿಸಲಾಗಿದೆ ಎಂದು ಜೈಸ್ವಾಲ್ ಆರೋಪಿಸಿದ್ದಾರೆ.
ಜೈಸ್ವಾಲ್ ಅವರಿಗೆ ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ಅನುಭವವಿಲ್ಲ. ಅವರ ವಿಶ್ವಾಸಾರ್ಹತೆ ಅನುಮಾನಾಸ್ಪದವಾಗಿರುವುದರಿಂದ ಸಿಬಿಐ ಮುಖ್ಯಸ್ಥರಾಗಿ ಅವರು ಮುಂದುವರೆಯುವದನ್ನು ಪ್ರಶ್ನಿಸಿ ತ್ರಿವೇದಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಜೈಸ್ವಾಲ್ ಅಫಿಡವಿಟ್ ಸಲ್ಲಿಸಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ನಕಲಿ ಛಾಪಾಕಾಗದ ಹಗರಣದ ತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ಸಮಿತಿಯ ಮುಖ್ಯಸ್ಥರಾಗಿದ್ದಾಗ ಜೈಸ್ವಾಲ್ ಅವರ ನಡೆ ಅನುಮಾನಾಸ್ಪದವಾಗಿತ್ತು ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಆದರೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಾವು ತ್ರಿವೇದಿ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದರಿಂದ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಇದೊಂದು ವೈಯಕ್ತಿಕ ದ್ವೇಷದಿಂದ ಕೂಡಿದ ಮೊಕದ್ದಮೆ. ತಮಗೆ ಕಿರುಕುಳ ನೀಡಲು ಮತ್ತು ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಕಾನೂನನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಜೈಸ್ವಾಲ್ ಅವರ ಅಫಿಡವಿಟ್ ವಿವರಿಸಿದೆ.