ನಾಟಕೀಯ ಬೆಳವಣಿಗೆಯೊಂದರಲ್ಲಿ ಸಿಬಿಐ ನಿರ್ದೇಶಕರಾಗಿ ಸುಬೋಧ್ ಕುಮಾರ್ ಜೈಸ್ವಾಲ್ ಅವರ ನೇಮಕವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯಿಂದ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಗುರುವಾರ ಹಿಂದೆ ಸರಿದಿದ್ದಾರೆ.
ಅರ್ಜಿದಾರರಾದ ರಾಜೇಂದ್ರಕುಮಾರ್ ವಿ ತ್ರಿವೇದಿ ಅವರು ತಮ್ಮ ವಿರುದ್ಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರಿಗೆ ಪತ್ರ ಬರೆದಿದ್ದಾರೆ ಎಂದು ನ್ಯಾ. ದತ್ತಾ ಅವರು ಮುಕ್ತ ನ್ಯಾಯಾಲಯದಲ್ಲಿ ಹೇಳಿದರು.
"ಅರ್ಜಿದಾರರು ಸಿಜೆಐಗೆ ಪತ್ರ ಬರೆದಿದ್ದಾರೆಂದು ತೋರುತ್ತಿದೆ. ಇದು ಉತ್ತಮ ಅಭಿರುಚಿಯಿಂದ ಕೂಡಿಲ್ಲ. ಹೀಗಿರುವಾಗ ನಮ್ಮನ್ನು ನಾವು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ" ಎಂದು ಸಿಜೆ ಪ್ರಶ್ನಿಸಿದರು. ತ್ರಿವೇದಿ ಪರ ವಕೀಲ ಎಸ್ ಬಿ ತಳೇಕರ್ ಅವರಿಗೂ ಸಿಜೆ ಪತ್ರ ತೋರಿಸಿದರು.
ಆದರೆ ತಮ್ಮ ಕಕ್ಷೀದಾರರು ಸಿಜೆಐ ಅವರಿಗೆ ಪತ್ರ ಬರೆದಿಲ್ಲ ಎಂದು ಬಲವಾಗಿ ನಿರಾಕರಿಸಿದ ತಾಳೇಕರ್ ಈ ಕುರಿತು ಅಫಿಡವಿಟ್ ಸಲ್ಲಿಸಲು ಸಿದ್ಧ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
“ನ್ಯಾಯ ಒದಗಿಸಲಾಗಿದೆ ಅನ್ನಿಸಬೇಕು. ಬೇರೆಯವರ ವರ್ಚಸ್ಸು ಹಾಳು ಮಾಡುವುದು ಬಲು ಸುಲಭ” ಎಂದು ನ್ಯಾ. ದತ್ತಾ ಈ ವೇಳೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಮಾತಿಗೆ ತಲೆದೂಗಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ "ಇತ್ತೀಚಿನ ದಿನಗಳಲ್ಲಿ, ಯಾರಿಗಾದರೂ ಪರಿಹಾರ ಸಿಗದಿದ್ದಾಗ, ಅವರು ಈ ರೀತಿ ಪತ್ರ ಬರೆಯುವುದು ಆಗಾಗ್ಗೆ ನಡೆಯುತ್ತಿದೆ. ಇದು ಟ್ರೆಂಡ್ ಆಗಿದೆ" ಎಂದರು.
ಆಗ ಮುಖ್ಯ ನ್ಯಾಯಮೂರ್ತಿಗಳು ಅರ್ಜಿದಾರರನ್ನುದ್ದೇಶಿಸಿ “ನೀವು ಬೇರೆ ಪೀಠವನ್ನು ಸಂಪರ್ಕಿಸುವುದು ಹೆಚ್ಚು ಸೂಕ್ತವಾಗಿರುತ್ತದೆ” ಎಂದು ತಾವು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವ ವಿಚಾರ ತಿಳಿಸಿದರು.
ಹಿನ್ನೆಲೆ
ಜೈಸ್ವಾಲ್ ಅವರಿಗೆ ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ಅನುಭವವಿಲ್ಲ. ಅವರ ವಿಶ್ವಾಸಾರ್ಹತೆ ಅನುಮಾನಾಸ್ಪದವಾಗಿರುವುದರಿಂದ ಸಿಬಿಐ ಮುಖ್ಯಸ್ಥರಾಗಿ ಅವರು ಮುಂದುವರೆಯುವುದನ್ನು ಪ್ರಶ್ನಿಸಿ ತ್ರಿವೇದಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ನಕಲಿ ಛಾಪಾಕಾಗದ ಹಗರಣದ ತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ಸಮಿತಿಯ ಮುಖ್ಯಸ್ಥರಾಗಿದ್ದಾಗ ಜೈಸ್ವಾಲ್ ಅವರ ನಡೆ ಅನುಮಾನಾಸ್ಪದವಾಗಿತ್ತು ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಆದರೆ ವೈಯಕ್ತಿಕ ದ್ವೇಷ ಮತ್ತು ಪ್ರತೀಕಾರದಿಂದಾಗಿ ತಮ್ಮನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ಪದಚ್ಯುತಗೊಳಿಸುವಂತೆ ತ್ರಿವೇದಿ ದೂರಿದ್ದಾರೆ ಎಂಬುದು ಜೈಸ್ವಾಲ್ ಅವರ ವಾದವಾಗಿತ್ತು.