UAPA 
ಸುದ್ದಿಗಳು

[ಯುಎಪಿಎ ಪ್ರಕರಣ] ಮಾವೋವಾದಿ ಸಂಘಟನೆಗೆ ನಿಧಿ ಸಂಗ್ರಹದ ಆರೋಪ: ಅನಿರುದ್ಧ್‌ ರಾಜನ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ತನಿಖಾಧಿಕಾರಿಯು 90 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಡಿಫಾಲ್ಟ್ ಜಾಮೀನು ಮಂಜೂರು ಮಾಡಬೇಕು ಎಂದು ರಾಜನ್‌ ಕೋರಿದ್ದರು.

Bar & Bench

ಕಮ್ಯುನಿಸ್ಟ್‌ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಪಕ್ಷದ ಸಕ್ರಿಯ ಸದಸ್ಯ ಮತ್ತು ಪಕ್ಷಕ್ಕಾಗಿ ನಿಧಿ ಸಂಗ್ರಹಿಸಲು ತೊಡಗಿದ್ದ ಆರೋಪದಲ್ಲಿ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಅನಿರುದ್ಧ್‌ ರಾಜನ್‌ಗೆ ಜಾಮೀನು ಮಂಜೂರು ಮಾಡಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.

ತನಿಖಾಧಿಕಾರಿಗಳು 90 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಜಾಮೀನು ಕೋರಿ ಚೆನ್ನೈ ಮೂಲದ 34 ವರ್ಷದ ರಾಜನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್ ಕುಮಾರ್ ಮತ್ತು ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ವಜಾಗೊಳಿಸಿದ್ದು, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

“ನಿಗದಿತ ಅವಧಿಯಲ್ಲಿ (90 ದಿನ) ತನಿಖೆ ಮುಗಿಯುವ ಮನ್ನವೇ ತನಿಖಾಧಿಕಾರಿಗಳು ಸೂಕ್ತ ದಾಖಲೆಗಳು ಮತ್ತು ಬಲವಾದ ಕಾರಣಗಳೊಂದಿಗೆ ಆರೋಪ ಪಟ್ಟಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಕೋರಿದ್ದಾರೆ. ಹೀಗಾಗಿ, ಆರೋಪಿ ಡಿಫಾಲ್ಟ್ ಜಾಮೀನು ಪಡೆಯುವ ಹಕ್ಕು ಕಳೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ 90 ದಿನ ಅವಧಿ ಮುಗಿಯುವ ಮುನ್ನವೇ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ (ಯುಎಪಿಎ) ಅಡಿಯಲ್ಲಿ ತನಿಖೆ ಪೂರ್ಣಗೊಳಿಸಲು ಕಾಲಾವಕಾಶ ಕೋರಲಾಗಿದೆ. ಹಾಗಾಗಿ ಡಿಫಾಲ್ಟ್‌ ಜಾಮೀನು ಪಡೆಯಲು ಅರ್ಜಿದಾರರು ಅರ್ಹರಾಗುವುದಿಲ್ಲ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

“ಆರೋಪಪಟ್ಟಿ ಸಲ್ಲಿಸುವುದಕ್ಕೆ ಕಾಲಾವಕಾಶ ಕೋರಿರುವ ಅರ್ಜಿ ವಿಚಾರಣಾಧೀನ ನ್ಯಾಯಾಲಯದಲ್ಲಿ ಬಾಕಿ ಇದೆ ಎಂಬ ಕಾರಣಕ್ಕೆ ಆರೋಪಿಗೆ ಜಾಮೀನು ಪಡೆಯುವ ಹಕ್ಕು ಸಿಕ್ಕಂತಾಗಿದೆ ಎನ್ನಲಾಗುವುದಿಲ್ಲ” ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್‌ ಬಾಲಕೃಷ್ಣನ್‌ ಅವರು “ಅರ್ಜಿದಾರರನ್ನು ಬಂಧಿಸಿ 90 ದಿನ ಕಳೆದಿದೆ. ಯುಎಪಿಎ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲು 180 ದಿನಗಳ ಕಾಲಾವಕಾಶ ಕೋರಿರುವ ಅರ್ಜಿ ಸಂಬಂಧ ವಿಚಾರಣಾಧೀನ ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ. ಆದ್ದರಿಂದ, ಡಿಫಾಲ್ಟ್‌ ಜಾಮೀನು ನೀಡಬೇಕು” ಎಂದು ಕೋರಿದ್ದರು.

ಪ್ರಾಸಿಕ್ಯೂಷನ್‌ ಪರ ವಕೀಲ ಪಿ ತೇಜಸ್‌ “ಯುಎಪಿಎ ಅಡಿ ತನಿಖೆ ನಡೆಯುತ್ತಿದ್ದು, ಆರೋಪ ಪಟ್ಟಿ ಸಲ್ಲಿಸಲು 180 ದಿನಗಳ ಕಾಲಾವಕಾಶ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಕೋರಲಾಗಿದೆ. ಈ ಅರ್ಜಿ ವಿಚಾರಣಾ ಹಂತದಲ್ಲಿದೆ. ಹೀಗಾಗಿ ಅರ್ಜಿದಾರರನ್ನು ಡಿಫಾಲ್ಟ್ ಜಾಮೀನಿನಡಿ ಬಿಡುಗಡೆ ಮಾಡಲು ಅವಕಾಶವಿಲ್ಲ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಚಾರ್ಟರ್ಡ್‌ ಅಕೌಂಟೆಟ್ ಆಗಿರುವ ಮೇಲ್ಮನವಿದಾರ ಅನಿರುದ್ಧ್ ರಾಜನ್ ಅವರು ನಕ್ಸಲರ ಪರ ಅನುಕಂಪ ಹೊಂದಿದ್ದು ಭೂಗತವಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅಗತ್ಯವಿರುವ ಹಣಕಾಸು ಒದಗಿಸುತ್ತಿದ್ದಾರೆ ಎಂದು ಆರೋಪಿಸಿ 2024ರ ಸೆಪ್ಟೆಂಬರ್ 5ರಂದು ಬಂಧ

ಅನಿರುದ್ಧ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 147 (ದೇಶದ ವಿರುದ್ಧ ಯುದ್ಧ ಸಾರುವುದು) 152 (ವಿಧ್ವಂಸಕ ಚಟುವಟಿಕೆ), 336 (ನಕಲಿ ದಾಖಲೆ ಸೃಷ್ಟಿ) ಮತ್ತು 340 (ನಕಲಿ ದಾಖಲೆ ಬಳಕೆ) ಮತ್ತು ಯುಎಪಿಎ ಸೆಕ್ಷನ್ 10 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಸಿ ಅಡಿ ಪ್ರಕರಣ ದಾಖಲಿಸಲಾಗಿದ್ದು, ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

Anirudh Rajan Vs State of Karnataka.pdf
Preview