Rockline Venkatesh and Karnataka HC
Rockline Venkatesh and Karnataka HC 
ಸುದ್ದಿಗಳು

ರಾಕ್‌ಲೈನ್‌ ಮಾಲ್‌ ಬೀಗ ತಕ್ಷಣ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

Bar & Bench

ಬಾಕಿ ತೆರಿಗೆ ಪಾವತಿಸದ ಕಾರಣ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್‌ ಮಾಲ್‌ಗೆ ಹಾಕಲಾಗಿರುವ ಬೀಗವನ್ನು ತಕ್ಷಣವೇ ತೆರವುಗೊಳಿಸುವಂತೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಆದೇಶಿಸಿದೆ.

ಬಿಬಿಎಂಪಿ ಕ್ರಮವನ್ನು ಪ್ರಶ್ನಿಸಿ ರಾಕ್‌ಲೈನ್‌ ಎಂಟರ್‌ಟೈನ್‌ಮೆಂಟ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಕ್‌ಲೈನ್‌ ವೆಂಕಟೇಶ್‌ ಪರ ಹಿರಿಯ ವಕೀಲ ಎಂ ಎಸ್‌ ಶ್ಯಾಮಸುಂದರ್‌ ಅವರು ಮಾಲ್‌ ಅನ್ನು ಲಾಕ್‌ ಮಾಡಲು ಬಿಬಿಎಂಪಿಯ ಪ್ರತ್ಯೇಕ ಕಾಯಿದೆಯಲ್ಲಾಗಲಿ ಅಥವಾ ಕೆಎಂಸಿ ಕಾಯಿದೆಯಲ್ಲಾಗಲೀ ಎಲ್ಲೂ ಅವಕಾಶವಿಲ್ಲ. ಈ ಹಿಂದೆ ಇದೇ ಹೈಕೋರ್ಟ್‌ನ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠ ಮಂತ್ರಿಮಾಲ್‌ ಪ್ರಕರಣದಲ್ಲಿ ಇದನ್ನು ಸ್ಪಷ್ಟಪಡಿಸಿದೆ. ತೆರಿಗೆ ಸಂಗ್ರಹಿಸಲು ಬಿಬಿಎಂಪಿಗೆ ಪರ್ಯಾಯ ಮಾರ್ಗಗಳಿವೆ. ಆದ್ದರಿಂದ, ರಾಕ್‌ಲೈನ್‌ ಮಾಲ್‌ ಬೀಗ ತೆರೆಯಲು ಆದೇಶಿಸಬೇಕು ಎಂದು ಕೋರಿದರು.

ಇದನ್ನು ಪುರಸ್ಕರಿಸಿದ ಪೀಠವು ಬಿಬಿಎಂಪಿ ಪರ ವಕೀಲರನ್ನು ಕುರಿತು ನೀವೇಕೆ ಈ ಹಿಂದೆ ಇದೇ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿಲ್ಲ ಎಂದು ಪ್ರಶ್ನಿಸಿತಲ್ಲದೆ, ‘ರಾಕ್‌ ಲೈನ್‌ ಮಾಲ್‌ಗೆ ಹಾಕಲಾಗಿರುವ ಬೀಗ ತೆರೆಯಿರಿ’ ಎಂದು ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.