KSLU and Karnataka High Court 
ಸುದ್ದಿಗಳು

ಮರು ಮೌಲ್ಯಮಾಪನ ಅಂಕ ಪರಿಗಣಿಸಿ ಕಾನೂನು ವಿದ್ಯಾರ್ಥಿನಿ ಉತ್ತೀರ್ಣಗೊಳಿಸಲು ಕಾನೂನು ವಿವಿಗೆ ಹೈಕೋರ್ಟ್‌ ನಿರ್ದೇಶನ

ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರೀಕ್ಷಾ ಸುಗ್ರೀವಾಜ್ಞೆ-2014ಕ್ಕೆ ಅಗತ್ಯ ತಿದ್ದುಪಡಿ ತರುವಂತೆ ನಿರ್ದೇಶಿಸಿದ ನ್ಯಾಯಾಲಯ.

Bar & Bench

ಮರು ಮೌಲ್ಯಮಾಪನದ ವೇಳೆ ವಿದ್ಯಾರ್ಥಿನಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ಆಕೆಗೆ ನ್ಯಾಯಯುತವಾಗಿ ಸಲ್ಲಬೇಕಾದ ಅಂಕಪಟ್ಟಿ ಇತ್ಯಾದಿ ದಾಖಲೆಗಳನ್ನು ಒದಗಿಸುವಂತೆ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಈಚೆಗೆ ನಿರ್ದೇಶಿಸಿರುವ ಕರ್ನಾಟಕ ಹೈಕೋರ್ಟ್‌, ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರೀಕ್ಷಾ ಸುಗ್ರೀವಾಜ್ಞೆ-2014ಕ್ಕೆ ಸೂಕ್ತ ತಿದ್ದುಪಡಿ ಮಾಡುವಂತೆ ನಿರ್ದೇಶಿಸಿದೆ.

ಬಿಎಂಎಸ್‌ ಕಾನೂನು ಕಾಲೇಜಿನ ಪ್ರಥಮ ವರ್ಷದ ಕಾನೂನು ಪದವಿಯ ವಿದ್ಯಾರ್ಥಿನಿ ಕೆ ವಿ ನಿಯತಿ ಅವರು ಮರು ಮೌಲ್ಯಮಾಪನದಲ್ಲಿ ಲಾ ಅಫ್‌ ಟೋರ್ಟ್ಸ್‌ ವಿಷಯದಲ್ಲಿ 33 ಅಂಕ ಪಡೆದಿರುವುದರಿಂದ ಆಕೆಯನ್ನು ಉತ್ತೀರ್ಣ ಎಂದು ಘೋಷಿಸಬೇಕು ಎಂದು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಆದೇಶಿಸಿದೆ.

Justice S R Krishna Kumar and Karnataka HC

“ಮರು ಮೌಲ್ಯಮಾಪನದಲ್ಲಿ ಅರ್ಜಿದಾರೆಯು ಪಡೆದುಕೊಂಡಿರುವ ಒಟ್ಟು ಅಂಕಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಆಕೆ ಯಶಸ್ವಿಯಾಗಿ ಉತ್ತೀರ್ಣವಾಗಿ, ಪರೀಕ್ಷೆ ಪೂರ್ಣಗೊಳಿಸುತ್ತಾರೆ. ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರೀಕ್ಷಾ ಸುಗ್ರೀವಾಜ್ಞೆಯ 1.3.6 ಕ್ಲಾಸ್‌ನ ಸಿಂಧುತ್ವ, ಕಾನೂನು ಮುಂತಾದವರ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೇ ಮರುಮೌಲ್ಯಮಾಪನದಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ಆಕೆಗೆ ಅಂಕಪಟ್ಟಿ ಇತ್ಯಾದಿ ದಾಖಲೆಗಳನ್ನು ನೀಡುವಂತೆ ಕಾನೂನು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಉಭಯ ಪಕ್ಷಕಾರರ ವಾದದ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಸೂಕ್ತ ಪ್ರಕರಣದಲ್ಲಿ ಅದನ್ನು ನಿರ್ಧರಿಸಲಾಗುವುದು. ಇಂಥ ಸಂದರ್ಭದಲ್ಲಿ ಸಿಲುಕುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾನೂನು ವಿಶ್ವವಿದ್ಯಾಲಯವು ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರೀಕ್ಷಾ ಸುಗ್ರೀವಾಜ್ಞೆ-2014ಕ್ಕೆ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಅರ್ಜಿ ಇತ್ಯರ್ಥಪಡಿಸಿದೆ.

ಪ್ರಕರಣದ ಹಿನ್ನೆಲೆ: ಕಾನೂನು ಪದವಿಯ ಪ್ರಥಮ ವರ್ಷದ ಮೊದಲ ಸೆಮಿಸ್ಟರ್ ವಿದ್ಯಾರ್ಥಿನಿ ನಿಯತಿ ಅವರು ಸಾಂವಿಧಾನಿಕ ಕಾನೂನು. ಕಾಂಟ್ರ್ಯಾಕ್ಟ್‌, ಕೌಟುಂಬಿಕ ಕಾನೂನು (ಹಿಂದೂ ಕಾನೂನು), ಕ್ರಿಮಿನಲ್ ಕಾನೂನು (ಭಾರತೀಯ ದಂಡ ಸಂಹಿತೆ) ವಿಷಯಗಳಲ್ಲಿ ಉತ್ತೀರ್ಣಕ್ಕೆ ಅಗತ್ಯವಾದ ಅಂಕ ಪಡೆದಿದ್ದರು. ಆದರೆ, ಲಾ ಆಫ್‌ ಟೋರ್ಟ್ಸ್‌ ವಿಷಯದಲ್ಲಿ 80 ಅಂಕಗಳಿಗೆ 25 ಅಂಕ ಮಾತ್ರ ಪಡೆದಿದ್ದರು. ಮರು ಮೌಲ್ಯ ಮಾಪನಕ್ಕೆ ಹಾಕಿದ್ದ ನಿಯತಿ 33 ಅಂಕ ಪಡೆದಿದ್ದರು. ಇದರ ಅನ್ವಯ ಆಕೆಯನ್ನು ಉತ್ತೀರ್ಣ ಎಂದು ಘೋಷಿಸಬೇಕಿತ್ತು. ಆದರೆ, 2014ರ ನವೆಂಬರ್‌ 5ರಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸುಗ್ರೀವಾಜ್ಞೆ ಅನ್ವಯ ನಿಯತಿ ಅವರನ್ನು ಅನುತ್ತೀರ್ಣಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ನಿಯತಿ ಅವರ ಅರ್ಜಿಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

Niyathi K V Vs KSLU.pdf
Preview