ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಬದಾಗುಂದಿಯ ಸಮೀಪದಲ್ಲಿ ವಿಸ್ಲಿಂಗ್ ವುಡ್ಸ್ ರೆಸಾರ್ಟ್‌ನವರು ಅರಣ್ಯ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ರೆಸಾರ್ಟ್ ಮಾಲೀಕರಾದ ಸ್ಮಿತಾ ಕೋಂ ವಿನಾಯಕ ಜಾಧವ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮಪ್ರಸಾದ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರ ವಿಭಾಗೀಯ ಪೀಠ ಮೇಲ್ಮನವಿ ವಿಲೇವಾರಿ ಮಾಡಿದೆ.
ರೆಸಾರ್ಟ್ ಪ್ರದೇಶ ಸುತ್ತ ಗಡಿ ಗುರುತಿಸಿರುವ ಭಾಗದಲ್ಲಿ ಅರಣ್ಯ ಇಲಾಖೆ ಒಂದು ತಿಂಗಳೊಳಗೆ ಬೇಲಿ ನಿರ್ಮಿಸಬೇಕು. ಬೇಲಿ ನಿರ್ಮಾಣಕ್ಕೆ ಅರಣ್ಯ ಇಲಾಖೆಗೆ ರೆಸಾರ್ಟ್ ಮಾಲೀಕರಾದ ಸ್ಮಿತಾ ಸಹಕಾರ ನೀಡಬೇಕು ಎಂದು ಪೀಠ ಆದೇಶಿಸಿದೆ.
ಬೇಲಿ ಭಾಗದಲ್ಲಿನ ತಾತ್ಕಾಲಿಕ ನಿರ್ಮಾಣಗಳನ್ನು ರೆಸಾರ್ಟ್‌ನವರು ತೆರವುಗೊಳಿಸಬೇಕು. ಒಂದು ವೇಳೆ ಅವರು ಮಾಡದಿದ್ದರೆ ಅರಣ್ಯ ಇಲಾಖೆಯವರು ತೆರವುಗೊಳಿಸಬೇಕು. ರೆಸಾರ್ಟ್ ಪ್ರವೇಶಕ್ಕೆ ಜಾಗ ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರೆಸಾರ್ಟ್‌ನವರು ಅರಣ್ಯ ಜಾಗ ಅತಿಕ್ರಮಣ ಮಾಡಿರುವುದಾಗಿ ಅರಣ್ಯ ಇಲಾಖೆ ಗುರುತಿಸಿತ್ತು. ಇದನ್ನು ಪ್ರಶ್ನಿಸಿ ರೆಸಾರ್ಟ್ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು.