WhatsApp, Karnataka High Court 
ಸುದ್ದಿಗಳು

ಗೋಹತ್ಯೆ ಸುಳ್ಳು ಸುದ್ದಿಯ ವಿಡಿಯೋ ಹಂಚಿಕೆ: ಕೊಡಗು ಯುವಕನ ವಿರುದ್ಧದ ಪ್ರಕರಣ ವಜಾ

ವಾಟ್ಸಾಪ್‌ ಗ್ರೂಪ್‌ಗೆ ವಿವೇಕ್‌ ಕಾರ್ಯಪ್ಪ ಆಕ್ಷೇಪಾರ್ಹವಾದ ವಿಡಿಯೋ ಹಾಕಿ, ಬಳಿಕ ಕ್ಷಣ ಮಾತ್ರದಲ್ಲೇ ಅದನ್ನು ಡಿಲೀಟ್‌ ಮಾಡಿ, ಗ್ರೂಪ್‌ನಿಂದ ಹೊರ ಹೋಗಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿರುವುದನ್ನು ನ್ಯಾಯಾಲಯ ಉಲ್ಲೇಖಿಸಿದೆ.

Bar & Bench

ಗೋಹತ್ಯೆ ವಿಡಿಯೋವನ್ನು ಒಳಗೊಂಡ ಸುಳ್ಳು ಸುದ್ದಿಯನ್ನು ವಾಟ್ಸಾಪ್‌ನಲ್ಲಿ ಹರಿಯ ಬಿಡುವ ಮೂಲಕ ದೊಂಬಿಗೆ ಪ್ರಚೋದನೆ ನೀಡಿದ ಆರೋಪದ ಸಂಬಂಧ ಕೊಡಗು ಜಿಲ್ಲೆಯ ಬೇರುಗ ಗ್ರಾಮದ ವಿವೇಕ್‌ ಕಾರ್ಯಪ್ಪ ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಗೊಳಿಸಿದೆ.

ʼಕೊಡಗು ಇಶ್ಯೂಸ್‌ ಅಂಡ್‌ ಸಜೆಷನ್ಸ್‌ʼ ಎಂಬ ವಾಟ್ಸಾಪ್‌ ಗ್ರೂಪ್‌ಗೆ ವಿವೇಕ್‌ ಕಾರ್ಯಪ್ಪ ಆಕ್ಷೇಪಾರ್ಹವಾದ ವಿಡಿಯೋ ಹಾಕಿ, ಬಳಿಕ ಕ್ಷಣ ಮಾತ್ರದಲ್ಲೇ ಅದನ್ನು ಡಿಲೀಟ್‌ ಮಾಡಿ, ಗ್ರೂಪ್‌ನಿಂದ ಹೊರ ಹೋಗಿದ್ದಾರೆ. ವಿವೇಕ್‌ ಕಾರ್ಯಪ್ಪ ವಿರುದ್ಧ ಸೆಕ್ಷನ್‌ 153 ಅನ್ವಯಿಸುವ ಅಂಶಗಳು ಇಲ್ಲ ಎಂದು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಹೇಳಿದೆ.

Justice S R Krishna Kumar

“ಆಕ್ಷೇಪಾರ್ಹವಾದ ದೂರು ಮತ್ತು ಆರೋಪ ಪಟ್ಟಿಯಲ್ಲಿ ಸೆಕ್ಷನ್‌ 153 ಅನ್ವಯಿಸುವ ಅಂಶಗಳು ಅನುಮಾನಾಸ್ಪದವಾಗಿ ಗೈರಾಗಿವೆ. ಗೋವಿಗೆ ಗುಂಡು ಹೊಡೆಯುತ್ತಿರುವುದು ಮತ್ತು ಆ ಗುಂಡು ಹೊಡೆಯುವುದು ಸರಿಯಲ್ಲ ಎಂದು ಹೇಳುತ್ತಿರುವುದನ್ನು ಬಿಟ್ಟರೆ ಅರ್ಜಿದಾರನನ್ನು ಪ್ರಕರಣದಲ್ಲಿ ಸಿಲುಕಿಸುವ ಯಾವುದೇ ಅಂಶಗಳು ಇಲ್ಲ. ವಿಡಿಯೊ ಹಂಚಿಕೊಂಡ ನಂತರ ಅದನ್ನು ಡಿಲೀಟ್‌ ಮಾಡಿ ಅರ್ಜಿದಾರನು ವಾಟ್ಸಾಪ್‌ ಗುಂಪಿನಿಂದ ನಿರ್ಗಮಿಸಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಹೀಗಾಗಿ, ಪ್ರಕರಣ ರದ್ದುಪಡಿಸಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ʼಕೊಡಗು ಇಶ್ಯೂಸ್‌ ಅಂಡ್‌ ಸಜಷನ್ಸ್‌ʼ ಎಂಬ ಗ್ರೂಪಿಗೆ ನಾಥೂರಾಮ್‌ ಗೋಡ್ಸೆ ಎಂಬಾತನು “ಕೇರಳ ಕಾಂಗ್ರೆಸ್‌ ಮಾಧ್ಯಮ ಉಸ್ತುವಾರಿಯಾದ ಮೊಹಮ್ಮದ್‌ ಮುಜಾಹಿದ್‌ ಇಸ್ಲಾಮ್‌ ಎಂಬಾತ ರಾಹುಲ್‌ ಗಾಂಧಿ ಗೆಲುವಿಗಾಗಿ ಗೋವಿಗೆ ಗುಂಡು ಹೊಡೆದು ಕೊಂದಿದ್ದಾನೆ. ಇದು ಹಿಂದೂಗಳ ಮೇಲಿನ ದ್ವೇಶದ ಪರಮಾವಧಿಯಾಗಿದೆ. ಹೀಗಾಗಿ, ವಿಡಿಯೊವನ್ನು ಕೇಂದ್ರ ಗೃಹ ಇಲಾಖೆ ತಲುಪುವವರೆಗೆ ಹಂಚಿದರೆ ಆತ ಬಂಧಿಸಲ್ಪಡುತ್ತಾನೆ ಎಂದು ಉಲ್ಲೇಖಿಸಿ” ಹಂಚಿಕೆ ಮಾಡಿದ್ದನು.

ಸದರಿ ವಿಡಿಯೋ ಮತ್ತು ಅದನ್ನು ಹಂಚಿಕೆ ಮಾಡಿದಾತನ ಹಿನ್ನೆಲೆ ಪರಿಶೀಲಿಸಲಾಗಿ ಆತನು ಬೇರುಗ ಗ್ರಾಮದ ವಿವೇಕ್‌ ಕಾರ್ಯಪ್ಪ ಎಂದು ತಿಳಿದು ಬಂದಿತ್ತು. ಆ ವಿಡಿಯೋ ಮಣಿಪುರ ರಾಜ್ಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದಾಗಿದ್ದು, ವಿವೇಕ್‌ ಕಾರ್ಯಪ್ಪನು ಈ ಘಟನೆ ಕೇರಳದಲ್ಲಿ ನಡೆದಿದೆ ಎಂದು ಬಿಂಬಿಸುವ ಮೂಲಕ ಅನ್ಯ ಧರ್ಮಗಳ ವಿರುದ್ಧ ಉದ್ದೇಶಪೂರ್ವಕ ಸುಳ್ಳು ಸುದ್ದಿ ಹರಿಬಿಟ್ಟಿದ್ದಾನೆ ಎಂದು ಶ್ರೀಮಂಗಲ ಠಾಣೆಯ ಪೇದೆ ಶರತ್‌ ಕುಮಾರ್‌ ದೂರು ನೀಡಿದ್ದರು.

ಇದರ ಅನ್ವಯ ವಿವೇಕ್‌ ಕಾರ್ಯಪ್ಪ ವಿರುದ್ಧ ಐಪಿಸಿ ಸೆಕ್ಷನ್‌ 505(2) ಅಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಪೊಲೀಸರು ಐಪಿಸಿ ಸೆಕ್ಷನ್‌ 505(2) ಕೈಬಿಟ್ಟು, ಐಪಿಸಿ ಸೆಕ್ಷನ್‌ 153 ಅಪರಾಧಕ್ಕೆ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಇದನ್ನು ವಿವೇಕ್‌ ಕಾರ್ಯಪ್ಪ ಪ್ರಶ್ನಿಸಿದ್ದರು. ಈಗ ಹೈಕೋರ್ಟ್‌ ಅದನ್ನು ವಜಾಗೊಳಿಸಿದೆ.

Vivek Kariappa Vs State of Karnataka.pdf
Preview